ರಾಷ್ಟ್ರಮಟ್ಟದ ಏರೋ ಡಿಸೈನ್ ಸ್ಪರ್ಧೆ: ಎಂಐಟಿಗೆ ದ್ವಿತೀಯ ಬಹುಮಾನ

Update: 2020-10-16 13:42 GMT

ಮಣಿಪಾಲ, ಅ.16: ಮಾಹೆ ವಿವಿಗೆ ಸೇರಿದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ವಿದ್ಯಾರ್ಥಿಗಳ ತಂಡ, ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಏರೋ ಡಿಸೈನ್ ಸ್ಪರ್ಧೆ ‘ಏರೋ ಡಾಮಿನೇಟರ್ 7.0’ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದೆ.

ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತಾಂತ್ರಿಕ ಉತ್ಸವ ‘ಗ್ರಾವಿಟಾಸ್’ನ ಅಂಗವಾಗಿ ಕಳೆದ ವಾರ ರಾಷ್ಟ್ರಮಟ್ಟದ ಈ ಏರೋ ಡಿಸೈನ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ದೇಶದಾದ್ಯಂತದಿಂದ ಆಗಮಿಸಿದ್ದ ಒಟ್ಟು 25 ವಿವಿಧ ಇಂಜಿನಿಯರಿಂಗ್ ಕಾಲೇಜು ತಂಡಗಳು ಪಾಲ್ಗೊಂಡಿದ್ದವು.

ಸ್ಪರ್ಧೆಯಲ್ಲಿ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಮೆಡಿಕಲ್ ಕಾರ್ಗೊ ಹಾಗೂ ಪ್ರಥಮ ಚಿಕಿತ್ಸೆಯನ್ನು ಕೊಂಡೊಯ್ಯುವ ಸ್ಥಿರ ರೆಕ್ಕೆಯನ್ನು ಹೊಂದಿರುವ ಚಿಕ್ಕ ವಿಮಾನದ ವಿನ್ಯಾಸವನ್ನು ಮಾಡಬೇಕಾಗಿತ್ತು. ಕೊನೆಯಲ್ಲಿ ಪ್ರತಿ ತಂಡದ ವಿನ್ಯಾಸ ವರದಿ, ತಾಂತ್ರಿಕ ಪ್ರಸ್ತುತಿ ಹಾಗೂ ವಿಮಾನ ಹಾರಾಟದ ಸಾಧ್ಯತೆಗಳ ಆಧಾರದಲ್ಲಿ ಅಂಕಗಳನ್ನು ನೀಡಿ ವಿಜೇತರನ್ನು ಆಯ್ಕೆ ಮಾಡಲಾಗಿತ್ತು.

ಎಂಐಟಿಯ ಏರೋ ಎಂಐಟಿ ತಂಡ ಮೂರು ವಿಭಾಗಗಳಲ್ಲಿ ಕ್ರಮವಾಗಿ 34.75, 33.75 ಹಾಗೂ 8.24 ಸ್ಕೋರ್‌ಗಳೊಂದಿಗೆ ಒಟ್ಟು 76.74 ಅಂಕ ಗಳೊಂದಿಗೆ ದ್ವಿತೀಯ ಸ್ಥಾನಿಯಾಯಿತು. ತಂಡದಲ್ಲಿ ಟೀಮ್ ಮ್ಯಾನೇಜರ್ ಆದಿತ್ಯ ಗುರುಮೂರ್ತಿ, ಏರೋಡೈನಮಿಕ್ ಹೆಡ್ ನಾಗರಾಜ್ ಗಣೇಶ್ ಪ್ರಭು ಹಾಗೂ ತಂಡದ ಸದಸ್ಯರಾದ ಪ್ರಣವ್ ಗುಪ್ತ, ಪ್ರಹ್ಲಾದ ಚಂದ್ರಹಾಸ ಹಾಗೂ ರಾಹುಲ್ ಅಲ್ವಾರಿಸ್ ಇದ್ದರು.

ಎಂಐಟಿ ತಂಡದ ವಿದ್ಯಾರ್ಥಿಗಳ ಉತ್ತಮ ಪ್ರದರ್ಶನದ ಕುರಿತಂತೆ ಹರ್ಷ ವ್ಯಕ್ತಪಡಿಸಿರುವ ಎಂಐಟಿಯ ನಿರ್ದೇಶಕ ಡಾ.ಶ್ರೀಕಾಂತ ರಾವ್, ನಮ್ಮ ವಿದ್ಯಾರ್ಥಿಗಳ ಅದ್ಭುತ ಪ್ರದರ್ಶನದ ಬಗ್ಗೆ ನಮಗೆ ಖುಷಿ ಇದೆ. ಇದು ಇಡೀ ಸಂಸ್ಥೆಗೆ ಹೆಮ್ಮೆ ಕ್ಷಣವಾಗಿದೆ. ತಮ್ಮ ಹೊಸ ಮತ್ತು ವಿನೂತನ ಕಲ್ಪನೆಯ ಮೂಲಕ ಇವರು ಮಾಡಿರುವ ಸಾಧನೆ ಉಳಿದವರಿಗೂ ಸ್ಪೂರ್ತಿ ತುಂಬಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News