ಉಡುಪಿಯಲ್ಲಿ ಕೊರೋನ ಪಾಸಿಟಿವ್ ಪ್ರಮಾಣ ಇಳಿಮುಖ: ಜಿಲ್ಲಾಧಿಕಾರಿ ಜಿ.ಜಗದೀಶ್

Update: 2020-10-16 13:54 GMT

ಉಡುಪಿ, ಅ.16: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು 20 ಸಾವಿರ ದಾಟಿದ್ದು, ಕಳೆದ ಆಗಸ್ಟ್ ತಿಂಗಳಿನಿಂದ ಕೊರೋನ ಪಾಸಿಟಿವಿಟಿ ಪ್ರಮಾಣವು ಇಳಿಮುಖವಾಗುತ್ತಿದೆ. ಹೀಗೆ ಸಾಕಷ್ಟು ಸುಧಾರಣೆ ಕಂಡಿರುವ ಪರಿಣಾಮ ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಐಸಿಯು ಬೆಡ್ ಹಾಗೂ ವೆಂಟಿಲೇಟರ್‌ಗೆ ಯಾವುದೇ ಕೊರತೆ ಆಗಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಆಗಸ್ಟ್ ಮಧ್ಯವಾರದಲ್ಲಿ ಶೇ.20-30ರಷ್ಟಿದ್ದ ಪಾಸಿಟಿವಿಟಿ ಪ್ರಮಾಣವು ಸೆಪ್ಟಂಬರ್‌ನಲ್ಲಿ ಶೇ.20ಕ್ಕಿಂತಲೂ ಕಡಿಮೆ ಹಾಗೂ ಅಕ್ಟೋಬರ್‌ನಲ್ಲಿ ಶೇ.10ಕ್ಕೆ ಇಳಿಕೆಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಹಿಂದಿಗಿಂತ ಮೂರು ಪಟ್ಟು ಹೆಚ್ಚು ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಮೊದಲು ಕಂಡು ಬರುತ್ತಿದ್ದ ಸರಾಸರಿ 300 ಪ್ರಕರಣಗಳು, ಈಗ 150ರಿಂದ 200ಕ್ಕೆ ಇಳಿಕೆ ಯಾಗಿದೆ ಎಂದರು.

10 ಲಕ್ಷ ಜನಸಂಖ್ಯೆಗೆ ಕರ್ನಾಟಕದಲ್ಲಿ 91,000 ಮತ್ತು ಭಾರತದಲ್ಲಿ 69 ಸಾವಿರ ಮಂದಿಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದರೆ, ಉಡುಪಿ ಜಿಲ್ಲೆಯಲ್ಲಿ 10ಲಕ್ಷ ಜನಸಂಖ್ಯೆಗೆ 1,16,268ಮಂದಿಯನ್ನು ಪರೀಕ್ಷೆ ಮಾಡ ಲಾಗಿದೆ. ದೇಶ ಮತ್ತು ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.6ರಷ್ಟಿದ್ದರೆ ಉಡುಪಿ ಜಿಲ್ಲೆಯಲ್ಲಿ ಅದರ ಪ್ರಮಾಣ ಶೇ.0.83ರಷ್ಟಿದೆ. ಹೀಗೆ ಉಡುಪಿ ಜಿಲ್ಲೆ ಅತಿ ಕಡಿಮೆ ಸಾವಿನ ಪ್ರಮಾಣದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಅವರು ಮಾಹಿತಿ ನೀಡಿದರು.

ಮಾರ್ಗಸೂಚಿಯಂತೆ ನವರಾತ್ರಿ

ನವರಾತ್ರಿ ಹಬ್ಬ ಆಚರಣೆಯ ಬಗ್ಗೆ ಸರಕಾರ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಅದನ್ನು ಎಲ್ಲ ದೇವಸ್ಥಾನದವರು ಪಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಆ ಪ್ರಕಾರವೇ ದೇವರ ದರ್ಶನ ಮತ್ತು ಉತ್ಸವಗಳಲ್ಲಿ ಸಾರ್ವ ಜನಿಕರು ಭಾಗವಹಿಸದಂತೆ ನೋಡಿಕೊಳ್ಳಬೇಕಾ ಗುತ್ತದೆ. ಈಗಾಗಲೇ ಇರುವ ದೇವಸ್ಥಾನಗಳಲ್ಲಿ ಭೋಜನ ವ್ಯವಸ್ಥೆ ಮುಂದುವರಿಸಲು ತಿಳಿಸಲಾಗಿದೆ. ಆದರೆ ನವರಾತ್ರಿಯ ಪ್ರಯುಕ್ತ ಹೊಸದಾಗಿ ಭೋಜನ ಆರಂಭಿಸಲು ಬೇರೆ ದೇವಳ ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಖಾಸಗಿ ಬಸ್‌ಗಳಲ್ಲಿ ಸರಕಾರ ನಿಗದಿ ಪಡಿಸಿರುವ ಪ್ರಯಾಣದರವನ್ನು ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಬೇಕೆಂದು ಅ.15ರಂದು ನಡೆದ ಆರ್‌ಟಿಎ ಸಭೆ ಯಲ್ಲಿ ನಿರ್ದೇಶನ ನೀಡಲಾಗಿದೆ. ಇದು ಜಿಲ್ಲೆಯಲ್ಲಿ ತಕ್ಷಣದಿಂದ ಜಾರಿಗೆ ಬರಲಿದೆ. ಬಸ್‌ಗಳಲ್ಲಿ ಸುರಕ್ಷಿತ ಅಂತರ ಕಾಪಾಡುವುದನ್ನು ಸರಕಾರ ಕೈಬಿಟ್ಟಿದ್ದು, ಮಾಸ್ಕ್ ಕಡ್ಡಾಯ ಮಾಡಿದೆ ಮತ್ತು ಪ್ರತಿ ಟ್ರಿಪ್‌ಗೆ ಬಸ್ಸನ್ನು ಸ್ಯಾನಿಟೈಸ್ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಉಡುಪಿಯ ಡಾ.ಟಿ.ಎಂ.ಎ.ಪೈ ಆಸ್ಪತ್ರೆಯಲ್ಲಿ ವಾರ್ಡ್‌ಗಳನ್ನು ಆರಂಭಿಸಿ ದ್ದರೂ ಅದು ಕೋವಿಡ್ ಆಸ್ಪತ್ರೆಯಾಗಿಯೇ ಮುಂದುವರೆಯಲಿದೆ. ಒಂದು ಬಾರಿ ಕೊರೋನ ಬಂದವರಿಗೆ ಎರಡನೇ ಬಾರಿಗೆ ಬಂದಿರುವುದು ಈವರೆಗೆ ವರದಿಯಾಗಿಲ್ಲ. ವಿದ್ಯಾಗಮ ಕೈಬಿಟ್ಟಿರುವ ಬಗ್ಗೆ ಸರಕಾರದಿಂದ ಈವರೆಗೆ ಯಾವುದೇ ವರದಿ ಕೇಳಿಲ್ಲ. ಅಂತಹ ವರದಿಯನ್ನು ಸಲ್ಲಿಸಲು ಸೂಚಿಸಿದರೆ, ಅಧಿಕಾರಿಗಳು, ಶಿಕ್ಷಕರು, ಪೋಷಕರ ಅಭಿಪ್ರಾಯ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಹೋಮ್ ಐಸೋಲೇಷನ್ 10 ದಿನ ಕಡ್ಡಾಯ

ಪಾಸಿಟಿವ್ ಬಂದವರು 10 ದಿನ ಹೋಮ್ ಐಸೋಲೇಷನ್‌ನಲ್ಲಿ ಇರ ಬೇಕು ಮತ್ತು ಏಳು ದಿನ ರಿಪೋರ್ಟಿಂಗ್ ಅವಧಿ ಇರುತ್ತದೆ. ಇವರ ಪ್ರಾಥಮಿಕ ಸಂಪರ್ಕ ಮಾಡಿದವರಿಗೆ ಏಳು ದಿನ ಹೋಮ್ ಕ್ವಾರಂಟೈನ್ ಮತ್ತು ಏಳು ದಿನ ರಿರ್ಪೋಟಿಂಗ್ ಅವಧಿಯನ್ನು ಕಡ್ಡಾಯ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.

ಜಿಲ್ಲೆಯಲ್ಲಿ ಹೋಮ್ ಐಸೋಲೇಶನ್‌ನಲ್ಲಿದ್ದ ಕೊರೋನ ರೋಗಿಗಳು ಯಾರು ಕೂಡ ಮೃತಪಟ್ಟಿಲ್ಲ. ಆದರೆ ಹೋಮ್ ಕ್ವಾರಂಟೇನ್‌ನಲ್ಲಿ ಇದ್ದ ಮೂವರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 980 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೊರೋನ ಪಾಸಿಟಿವ್ ಬಂದಿದ್ದರೂ ಯಾವುದೇ ಮರಣ ಸಂಭವಿಸಿಲ್ಲ ಎಂದು ಅವರು ತಿಳಿಸಿದರು.

ಬೈಕಿನಲ್ಲಿ ಮಾಸ್ಕ್ ಕಡ್ಡಾಯ

ಕಾರಿನಲ್ಲಿ ಒಂದೇ ಕುಟುಂಬದವರು ಪ್ರಯಾಣಿಸುವಾಗ ಮಾಸ್ಕ್ ಕಡ್ಡಾಯ ಇಲ್ಲ. ಆದರೆ ಕೆಳಗೆ ಇಳಿಯುವ ಸಂದರ್ಭದಲ್ಲಿ ಮಾಸ್ಕ್ ಕಡ್ಡಾಯ ವಾಗಿ ಹಾಕಬೇಕು. ದಂಡ ಹಾಕುವ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೈಕಿನಲ್ಲಿ ಒಬ್ಬ ಸವಾರಿ ಮಾಡುವಾಗಲೂ ಮಾಸ್ಕ್ ಕಡ್ಡಾಯ ಹಾಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News