ಲೈಂಗಿಕ ದೌರ್ಜನ್ಯ ವಿರುದ್ಧ ಕಠಿಣ ಕ್ರಮಕ್ಕೆ ಶಾಸಕ ಭರತ್ ಶೆಟ್ಟಿ ಒತ್ತಾಯ
ಮಂಗಳೂರು, ಅ.16: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದನ್ನು ಇಷ್ಟು ವರ್ಷಗಳ ಕಾಲ ಮುಚ್ಚಿಟ್ಟವರ ಮತ್ತು ಲೈಂಗಿಕ ದೌರ್ಜನ್ಯ ನಡೆಸಿದ ತಪ್ಪತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ವಿವಿ ಅಕಾಡಮಿಕ್ ಕೌನ್ಸಿಲ್ ಸದಸ್ಯ, ಶಾಸಕ ಡಾ.ಭರತ್ ಶೆಟ್ಟಿ ಉಪಮುಖ್ಯಮಂತ್ರಿ ಡಾ.ಅಶ್ವಥನಾರಾಯಣ್ ಅವರನ್ನು ಆಗ್ರಹಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಈ ಘಟನೆ ನಡೆದಿದೆ. ಗಂಭೀರವಾದ ಪ್ರಕರಣವನ್ನು ಮುಚ್ಚಿಡಲಾಗಿತ್ತು. ಮಹಿಳಾ ಆಯೋಗ ವರದಿ ಕೇಳಿದ್ದರೂ ಸತಾಯಿಸಲಾಗಿದೆ. ಯಾಕಾಗಿ ತಪ್ಪಿತಸ್ಥರನ್ನು ರಕ್ಷಿಸಲಾಗಿದೆ. ಇದು ಶಿಕ್ಷಣ ಕ್ಷೇತ್ರ ಮತ್ತು ವಿದ್ಯಾರ್ಥಿ ವಲಯದಲ್ಲಿ ತಪ್ಪು ಸಂದೇಶ ರವಾನೆಯಾಗಿದೆ. ತಕ್ಷಣ ತಪ್ಪು ಮಾಡಿದವರನ್ನು ಅಮಾನತು ಮಾಡಿ ಕೇಸು ದಾಖಲಿಸಬೇಕು. ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳು ಲೈಂಗಿಕ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಇಂತಹ ದುರ್ಘಟನೆ ಕ್ಯಾಂಪಸ್‌ಗಳಲ್ಲಿ ನಡೆಯದಂತೆ ಪಾರದರ್ಶಕ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.