‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನ: ಜಿಲ್ಲಾಧಿಕಾರಿ ಜಗದೀಶ್
ಉಡುಪಿ, ಅ.16: ಜಿಲ್ಲೆಯಲ್ಲಿ ಪ್ರತಿಯೊಬ್ಬರಿಗೂ ಕೋವಿಡ್-19 ಕುರಿತು ಜಾಗೃತಿ ಮೂಡಿಸಲು ಹಾಗೂ ಸೋಂಕಿನಿಂದ ಹಿರಿಯರನ್ನು ರಕ್ಷಿಸುವ ಉದ್ದೇಶ ದಿಂದ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಎಂಬ ಅಭಿಯಾನವನ್ನು ರೂಪಿಸಿದ್ದು, ಅ.17ರಿಂದ ಪ್ರತಿ ಮನೆಗಳಿಗೆ ಭೇಟಿ ನೀಡಿ ಈ ಕುರಿತು ಅರಿವು ಮೂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಡಿ ಅಂಗನವಾಡಿ ಕಾರ್ಯಕರ್ತೆಯರು, ಬಿಎಲ್‌ಓಗಳು ಪ್ರತೀ ಮನೆಗೆ ಭೇಟಿ ನೀಡಿ, ಕರಪತ್ರ ವಿತರಿಸಲಿರುವರು. ಅಲ್ಲಿ ಮನೆಯವರಿಂದ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸುವ ಕುರಿತು ಪ್ರತಿಜ್ಞಾ ವಿಧಿ ಬೋದಿಸಿ, ಅವರಿಂದ ಸಹಿ ಪಡೆಯಲಿದ್ದಾರೆ. ನಂತರ ಮನೆಯ ಗೋಡೆಗಳ ಮೇಲೆ ಅರಿವು ಮೂಡಿಸುವ ಸ್ಟಿಕ್ಕರ್ ಳನ್ನು ಅಂಟಿಸಲಿದ್ದಾರೆ ಎಂದರು.
ರಿವರ್ಸ್ ಕ್ವಾರಂಟೇನ್: ಕೋವಿಡ್ ಅನ್‌ಲಾಕ್ 5.0 ಘೋಷಣೆಯಾದ ನಂತರ ಎಲ್ಲವೂ ಪುನಾರಂಭ ಆಗಿರುವುದರಿಂದ ಕೊರೋನ ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಅದೇ ರೀತಿ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತ ಪಟ್ಟವರ ಪೈಕಿ ಶೇ.75ರಷ್ಟು ಮಂದಿ 60ವಯಸ್ಸು ಮೀರಿದವರು. ಆದುದರಿಂದ ಅವರಿಗೆ ಕಾಯಿಲೆ ಬಾರದಂತೆ ರಕ್ಷಿಸಲು ರಿವರ್ಸ್ ಕ್ವಾರಂಟೈನ್ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸೋಂಕು ಕಡಿಮೆಯಾಗುತ್ತಿದ್ದರೂ ಪ್ರತಿಯೊಬ್ಬರೂ ತಮ್ಮ ಕುಟುಂಬದ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕಾಗಿದೆ. ಅದರಲ್ಲೂ ಮನೆಯಲ್ಲಿನ ಹಿರಿಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ರೋಗ ಲಕ್ಷಣಗಳಿ ದ್ದಲ್ಲಿ ಶೀಘ್ರದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ತಮ್ಮ ಮನೆಯಲ್ಲಿರುವ ಹಿರಿಯ ಜೀವಗಳನ್ನು ರಕ್ಷಿಸಬಹುದಾಗಿದೆ. ಇದೇ ಉದ್ದೇಶದಿಂದ ಅಭಿಯಾನ ವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಆಶಾ ಕಾರ್ಯಕತೆಯರಿಗೆ ಪಲ್ಸ್ ಆಕ್ಸಿಮೀಟರ್ ಸಾಧನವನ್ನು ವಿತರಿಸಿ, ಪ್ರತಿ ಮನೆಯ ವ್ಯ ಕ್ತಿಗಳಲ್ಲಿನ ಆಕ್ಸಿಜನ್ ಪ್ರಮಾಣ ಪರೀಕ್ಷಿಸಿ, ಅವರನ್ನು ಕೋವಿಡ್‌ನಿಂದ ರಕ್ಷಿಸುವ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಕಾರ್ಕಳ ದಲ್ಲಿ ಯೋಜನೆ ಆರಂಭಗೊಂಡಿದ್ದು, ಉಡುಪಿ ಮತ್ತು ಕುಂದಾಪುರದಲ್ಲಿ ಶೀಘ್ರದಲ್ಲಿ ಆರಂಭಿಲಾಗುವುದು ಎಂದು ಡಿಸಿ ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹೊರತಂದ ಕೋವಿಡ್ -19 ಮಾಹಿತಿ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಲಾಯಿತು. ಉಡುಪಿ ಜಿಪಂ ಸಿಇಓ ಡಾ.ನವೀನ್ ಭಟ್, ಡಿಎಚ್‌ಓ ಡಾ.ಸುಧೀರ್ ಚಂದ್ರ ಸೂಡಾ, ಜಿಲ್ಲಾ ಕೋವಿಡ್ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಟ್, ಡಾ.ಪ್ರೇಮಾನಂದ್ ಉಪಸ್ಥಿತರಿದ್ದರು.
ಪ್ರಸ್ತುತ ಎಲ್ಲಾ ಶಾಲೆಗಳಲ್ಲಿ ಆನ್‌ಲೈನ್ ಶಿಕ್ಷಣ ನೀಡುತ್ತಿದ್ದು, ಆನ್‌ಲೈನ್ ತರಗತಿಯ ಆರಂಭದಲ್ಲಿ ಶಿಕ್ಷಕರು, ಮಕ್ಕಳಿಗೆ ಕೋವಿಡ್ ಜಾಗೃತಿ ಕುರಿತು ವಾರಕ್ಕೊಂದು ವಿಷಯದಂತೆ 5 ನಿಮಿಷಗಳ ಕಾಲ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಈ ಯೋಜನೆ ರಾಜ್ಯದಲ್ಲೇ ಪ್ರಥಮವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಕೋವಿಡ್ ಪರೀಕ್ಷಾ ವಿಧಾನ, ಯಾರನ್ನು ಸಂಪರ್ಕಿಸಬೇಕು, ಆಸ್ಪತ್ರೆಗಳಿಗೆ ದಾಖಲಾಗುವ ವಿಧಾನ, ದೊರೆಯುವ ಚಿಕಿತ್ಸೆ ಮುಂತಾದವುಗಳ ಕುರಿತು ಸಮಗ್ರ ಮಾಹಿತಿಯನ್ನು ಕರಪತ್ರದಲ್ಲಿ ಮುದ್ರಿಸಿ, ಆಯಾ ಗ್ರಾಮದ ಪಿಡಿಓಗಳ ಮೂಲಕ ಪ್ರತಿ ಮನೆ ಮನೆಗೆ ತಲುಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಓ ಡಾ. ನವೀನ್ ಭಟ್ ಹೇಳಿದರು.