ಮನಪಾ ವ್ಯಾಪ್ತಿಯ ವಿವಿಧೆಡೆ ಒಳಚರಂಡಿ ಕಾಮಗಾರಿ; ವಾಹನ ಸಂಚಾರ ನಿಷೇಧ: ಕಮಿಷನರ್

Update: 2020-10-16 16:33 GMT

ಮಂಗಳೂರು, ಅ.16: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧೆಡೆ ಒಳಚರಂಡಿ ಕಾಮಗಾರಿ ಕೈಗೊಂಡಿದ್ದು, ನಿಗದಿತ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಈ ಕುರಿತು ಆದೇಶ ಹೊರಡಿಸಿರುವ ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್, ನಗರದ ಓಶಿಯನ್ ಪರ್ಲ್ ಹೊಟೇಲ್‌ನಿಂದ ಶಾರದಾ ಕಾಲೇಜು, ಪಿವಿಎಸ್ ಕಲಾಕುಂಜ ಹಾಗೂ ಸುರತ್ಕಲ್‌ನಲ್ಲಿ ಒಳಚರಂಡಿ ಕಾಮಗಾರಿ, ಯೆಯ್ಯಡಿ-ದಂಡಕೇರಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯಲಿವೆ. ಇದರಿಂದ ವಾಹನ ಸಂಚಾರ ನಿರ್ಬಂಧಿಸಿರುವುದಾಗಿ ತಿಳಿಸಿದ್ದಾರೆ.

ಓಷಿಯನ್ ಪರ್ಲ್: ಮನಪಾದ ವಾರ್ಡ್ ನಂ.29ರ ಹೊಟೇಲ್ ಓಷಿಯನ್ ಪರ್ಲ್‌ನಿಂದ ಶಾರದಾ ಸ್ಕೂಲ್ ರಸ್ತೆ- ಪಿವಿಎಸ್ ಕಲಾಕುಂಜ ರಸ್ತೆ ಯಲ್ಲಿ ಒಳಚರಂಡಿ ಕಾಮಗಾರಿ ನಿರ್ವಹಿಸಲಾಗುತ್ತಿದೆ. ಇದರಿಂದ ಶಾರದಾ ಸ್ಕೂಲ್ ರಸ್ತೆವರೆಗೆ ಅ.16ರಿಂದ 30ರವರೆಗೆ ಮತ್ತು ಪಿವಿಎಸ್ ಕಲಾಕುಂಜ ರಸ್ತೆಯಲ್ಲಿ ಅ.31ರಿಂದ ನವೆಂಬರ್ 15ರವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಶಾರದಾ ಸ್ಕೂಲ್ ರಸ್ತೆಯಲ್ಲಿ ಕಾಮಗಾರಿ ನಡೆಯುವ ವೇಳೆ ಈ ರಸ್ತೆಯಲ್ಲಿ ಸಂಚರಿಸುವ ಎಲ್ಲ ವಾಹನಗಳು ಪಿವಿಎಸ್ ಜಂಕ್ಷನ್‌ನಿಂದ ಮುಂದುವರಿದು ಬೆಸೆಂಟ್ ಜಂಕ್ಷನ್ ಮೂಲಕ ಪಿವಿಎಸ್ ಕಲಾಕುಂಜ ರಸ್ತೆಯಲ್ಲಿ ಸಂಚರಿಸಬಹುದು.

ಪಿವಿಎಸ್ ಕಲಾಕುಂಜ ರಸ್ತೆಯಲ್ಲಿ ಕಾಮಗಾರಿ ನಡೆಯುವ ವೇಳೆ ಶಾರದಾ ಸ್ಕೂಲ್‌ನಿಂದ ಬೆಸೆಂಟ್ ಜಂಕ್ಷನ್ ಕಡೆಗೆ ಸಂಚರಿಸಬಹುದು. ಈ ರಸ್ತೆಯ ಆಸು ಪಾಸಿನನವರು ಡೊಂಗರಕೇರಿ ವೆಂಕಟ್ರಮಣ ದೇವಸ್ಥಾನದ ಸಮೀಪದಿಂದ ಒಳ ರಸ್ತೆ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ.

ಸುರತ್ಕಲ್: ಸುರತ್ಕಲ್ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-66ರ ಬದಿಯ ಸರ್ವಿಸ್ ರಸ್ತೆಯಲ್ಲಿ ಒಳಚರಂಡಿ ಕೊಳವೆ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಈ ರಸ್ತೆಯಲ್ಲಿ ಅ.16ರಿಂದ 31ರವರೆಗೆ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.

ಸುರತ್ಕಲ್ ಜಂಕ್ಷನ್ ಕಡೆಯಿಂದ ಗೋವಿಂದದಾಸ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸುರತ್ಕಲ್ ಜಂಕ್ಷನ್ ಕಡೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಬಹುದು. ಗೋವಿಂದದಾಸ ಕಡೆಯಿಂದ ಸುರತ್ಕಲ್ ಕಡೆಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಸುರತ್ಕಲ್ ಸೇಕ್ರೆಡ್ ಹಾರ್ಟ್ ಚರ್ಚ್ ಕಡೆಯಿಂದ ಸುರತ್ಕಲ್ ಮಾರ್ಕೆಟ್ ರಸ್ತೆಯಾಗಿ ಸುರತ್ಕಲ್ ಜಂಕ್ಷನ್ ಹಾಗೂ ಚೊಕ್ಕಬೆಟ್ಟು ಕಾಟಿಪಳ್ಳ ಕಡೆಗೆ ಸಂಚರಿಸಬಹುದು.

ಸುರತ್ಕಲ್ ಮಾರ್ಕೆಟ್ ಕಡೆಯಿಂದ ಗೋವಿಂದದಾಸ ಕಡೆಗೆ ಬರುವ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದೆ. ಸುರತ್ಕಲ್ ಮಾರ್ಕೆಟ್ ಒಳರಸ್ತೆಯಾಗಿ ಸರ್ವಿಸ್ ರಸ್ತೆಗೆ ಪ್ರವೇಶಿಸುವುದನ್ನೂ ಸಂಪೂರ್ಣ ನಿಷೇಧಿಸಿದೆ.

ಯೆಯ್ಯಡಿ: ಮನಪಾ ವ್ಯಾಪ್ತಿಯ ಯೆಯ್ಯಿಡಿ-ದಂಡಕೇರಿ (ಕುಂಟಲ್ಪಾಡಿ) ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಯೆಯ್ಯಿಡಿ- ಕುಂಟಲ್ಪಾಡಿ- ಶಕ್ತಿನಗರ ಕೂಡು ರಸ್ತೆಯಲ್ಲಿ ಎಲ್ಲ ರೀತಿಯ ವಾಹನ ಸಂಚಾರವನ್ನು ಅ.16ರಿಂದ ನ.29ರವರೆಗೆ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕುಂಟಲ್ಪಾಡಿ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ನಡೆಯುವ ವೇಳೆ ಯೆಯ್ಯೆಡಿ ಜಂಕ್ಷನ್‌ನಿಂದ- ದಂಡಕೇರಿ (ಕುಂಟಲ್ಪಾಡಿ) ರಸ್ತೆಯಾಗಿ ಶಕ್ತಿನಗರ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಕಾಮಗಾರಿ ನಡೆಯುವ ಸ್ಥಳದ ಬಳಿ ಬಂದು ಬಲಕ್ಕೆ ತಿರುಗಿ ಕಾಂಕ್ರಿಟ್ ರಸ್ತೆಯಲ್ಲಿ ಸಾಗ ಬೇಕು. ಮುಂದೆ ಈಡನ್ ಕ್ಲಬ್- ನಂತೂರು ಮಾರ್ಗವಾಗಿ ಸಂಚರಿಸಲು ಅವಕಾಶವಿದೆ.

ಯೆಯ್ಯಡಿ ಜಂಕ್ಷನ್‌ನಿಂದ ದಂಡಕೇರಿ (ಕುಂಟಲ್ಪಾಡಿ) ರಸ್ತೆಯಾಗಿ ಶಕ್ತಿನಗರ ಕಡೆಗೆ ಸಂಚರಿಸುವ ಎಲ್ಲ ವಾಹನಗಳು ಕೆಪಿಟಿ - ನಂತೂರು ಮಾರ್ಗವಾಗಿ ಬಿಕರ್ನಕಟ್ಟೆ ಕ್ರಾಸ್ ರಸ್ತೆಯಾಗಿ ಶಕ್ತಿನಗರ ಕಡೆಗೆ ಸಂಚರಿಸುವುದು. ಶಕ್ತಿನಗರದಿಂದ ಕುಂಟಲ್ಪಾಡಿ ರಸ್ತೆ ಮೂಲಕ ಯೆಯ್ಯೆಡಿ ಕಡೆಗೆ ಹೋಗುವ ಎಲ್ಲ ವಾಹನಗಳು ಸೂರ್ಯ ನಗರದ ಮೂಲಕ ಮೇರಿಹಿಲ್- ಗುರುನಗರಕ್ಕೆ ಬಂದು ಅಲ್ಲಿಂದ ಮುಂದೆ ಸಂಚರಿಸುವುದು.

ಶಕ್ತಿನಗರದಿಂದ ಯೆಯ್ಯಿಡಿ ಕಡೆಗೆ ಸಂಚರಿಸುವ ವಾಹನಗಳು ಬಿಕರ್ನಕಟ್ಟೆ ಕ್ರಾಸ್‌ಗೆ ಬಂದು ನಂತೂರು- ಕೆಪಿಟಿ ಮಾರ್ಗವಾಗಿ ಯೆಯ್ಯಾಡಿ ಕಡೆಗೆ ಸಂಚರಿಸಲು ಪೊಲೀಸ್ ಇಲಾಖೆ ಅವಕಾಶ ಕಲ್ಪಿಸಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್‌ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News