ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಜಾಗ ದುರ್ಬಳಕೆ: ಆರೋಪ

Update: 2020-10-16 16:37 GMT

ಮಂಗಳೂರು, ಅ.16: ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘದ ಒಡೆತನದ ನಿವೇಶನದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗೆ ನ್ಯಾಯಾಲಯ ಶುಕ್ರವಾರ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಮಂಗಳೂರು ಸ್ಮಾರ್ಟ್‌ಸಿಟಿಯು ತನ್ನ ಕಚೇರಿ ಕಟ್ಟಡಕ್ಕೆ ತಾಗಿಕೊಂಡಿರುವ ಸಂಘದ ಸ್ವಾಧೀನ ಜಾಗವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ದ.ಕ. ಜಿಲ್ಲಾ ಸರಕಾರಿ ನೌಕರರ ಸಂಘವು ದಾವೆ ಹೂಡಿ, ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿತ್ತು.

ಶುಕ್ರವಾರ ಅರ್ಜಿದಾರರ ದಾವೆ ಪುರಸ್ಕರಿಸಿದ ನ್ಯಾಯಾಲಯವು, ಪ್ರತಿವಾದಿಗಳು ಮತ್ತು ಅವರ ಸೇವಕರು ಹಾಗೂ ಪ್ರತಿನಿಧಿಗಳು ಯಾರೂ ಸಂಘದ ಒಡೆತನಕ್ಕೆ ಒಳಪಟ್ಟ ನಿವೇಶನವನ್ನು ಪ್ರವೇಶಿಸಿ ಅಕ್ರಮವಾಗಿ ಯಾವುದೇ ಕಾಮಗಾರಿ ನಡೆಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ಏನಿದು ನಿವೇಶನ: ಮಂಗಳೂರಿನ ಹೃದಯ ಭಾಗದಲ್ಲಿ ಮಿನಿ ವಿಧಾನಸೌಧದ ಪಕ್ಕದಲ್ಲಿ ಸಂಘವು 45 ಸೆನ್ಸ್ ಜಮೀನನ್ನು ಹೊಂದಿದ್ದು, ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಸೂಟರ್ ವಾಚನಾಲಯ ಮತ್ತು ರಾಜಾರಾಮ್ ಬ್ಲಾಕ್ ಇದ್ದ ಎನ್‌ಜಿಒ ಕಟ್ಟಡದ ಭಾಗವನ್ನು ಕೆಡವಿ 10 ವರ್ಷಗಳ ಹಿಂದೆ ಸಿಟಿ ಸರ್ವೇ ಇಲಾಖೆಯ ಕಚೇರಿ ಕಟ್ಟಡ ನಿರ್ಮಾಣವಾಗಿತ್ತು. ಇಲ್ಲಿ ಸಂಘದ ನಿವೇಶನವಿದೆ. ಇತ್ತೀಚೆಗೆ ಸಂಘದ ಕಾರ್ಯಕಾರಿ ಸಮಿತಿಯ ಅನುಮತಿ ಇಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸಂಘದ ಒಡೆತನದ ಜಮೀನಿನಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆದಿತ್ತು.

ಕಾಮಗಾರಿ ಕಾರ್ಯ ನಿಲ್ಲಿಸುವಂತೆ ಸಂಘವು ಮಾಡಿದ ಮನವಿ ನಿರ್ಲಕ್ಷಿಸಿದ ಸ್ಮಾರ್ಟ್‌ಸಿಟಿ ಯೋಜನೆಯ ಆಡಳಿತ ನಿರ್ದೇಶಕರ ವಿರುದ್ಧ ಆರಂಭದಲ್ಲಿ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಸಂಘದಿಂದ ದೂರು ದಾಖಲಿಸಲಾಗಿತ್ತು.

ಸ್ಮಾರ್ಟ್‌ಸಿಟಿಯು ‘ನಿರ್ಮಾಣ ಕಾರ್ಯ ನಿಲ್ಲಿಸುತ್ತೇವೆ’ ಎಂದು ಮೌಖಿಕವಾಗಿ ಭರವಸೆ ನೀಡಿತ್ತು. ಆದಾಗ್ಯೂ, ಕಾಮಗಾರಿ ನಿಲ್ಲಿಸದ ಕಾರಣ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಆಡಳಿತ ನಿರ್ದೇಶಕರು; ಮಂಗಳೂರಿನ ನಗರ ಮಾಪನ ಕಚೇರಿಯ ಯೋಜನಾಧಿಕಾರಿ ಹಾಗೂ ರಾಜ್ಯವನ್ನು ಪ್ರತಿನಿಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಅವರನ್ನು ಪ್ರತಿವಾದಿಗಳಾಗಿ ಉಲ್ಲೇಖಿಸ ಲಾಗಿತ್ತು. ಸಂಘದ ನಿವೇಶನದಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾಮಗಾರಿ ನಡೆಸದಂತೆ ಶಾಶ್ವತ ನಿರ್ಬಂಧಕಾಜ್ಞೆ ನೀಡುವಂತೆ ಒತ್ತಾಯಿಸಿ ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಸಂಘದಿಂದ ದಾವೆ ಹೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News