ಉಳ್ಳಾಲ 18ನೇ ವಾರ್ಡ್‌ಗೆ ನಗರಸಭೆಯಿಂದ ಅನ್ಯಾಯ : ಆರೋಪ

Update: 2020-10-16 16:47 GMT

ಮಂಗಳೂರು, ಅ.16: ಉಳ್ಳಾಲ ನಗರಸಭೆಯ 18ನೇ ಗಂಡಿ ವಾರ್ಡ್‌ನಲ್ಲಿ ಕಳೆದ 2 ವರ್ಷದಿಂದ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸದೆ ಬಡ ನಿವಾಸಿಗಳಿಗೆ ಅನ್ಯಾಯ ಮಾಡಿದೆ ಎಂದು ನಗರಸಭೆ ಸದಸ್ಯ ದಿನಕರ ಉಳ್ಳಾಲ್ ಆರೋಪಿಸಿದ್ದಾರೆ.

ಗಂಡಿ ಪ್ರದೇಶ ಗುಡ್ಡಗಾಡುಗಳಿಂದ ಕೂಡಿದ್ದು, ಇಲ್ಲಿನ ಜನರು ಬಡವರಾಗಿದ್ದಾರೆ. ಸರ್ಕಾರದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. 10 ವರ್ಷದ ಹಿಂದೆ ಈ ಪ್ರದೇಶಕ್ಕೆ ಕೆಯುಡಿಎಫ್‌ಸಿ/ಪಿಡಬ್ಯೂಡಿ/ಪಂಚಾಯಿತಿಯವರು ಅನುದಾನ ಮೀಸಲಿಟ್ಟ ಬಳಿಕ ಯಾವುದೇ ಅನುದಾನ ಬಂದಿಲ್ಲ ಎಂದವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

2017ರಲ್ಲಿ ಈ ವಾರ್ಡ್‌ನ ಗಂಡಿ ಹಾಗು ಅಡ್ಡ ರಸ್ತೆಗಳನ್ನು 50 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ನಿರ್ಣಯಿಸಿ ತಾಂತ್ರಿಕ ಮಂಜೂರಾತಿ ನೀಡಿ ಮೇ 2018ರಲ್ಲಿ ಕಾಮಗಾರಿ ಆರಂಭಿಸಲು ಗುತ್ತಿಗೆ ನೀಡಲಾಗಿತ್ತು. ಶಂಕು ಸ್ಥಾಪನೆಯನ್ನು ನಡೆಸಿ ಕಾಮಗಾರಿ ಆರಂಭಾಗುವಷ್ಟರಲ್ಲಿ ತಡೆಯೊಡ್ಡಲಾಗಿತ್ತು.

ವಾರ್ಡ್ ಸದಸ್ಯನಾಗಿ ಚುನಾಯಿತನಾದ ಬಳಿಕ ಕಾಮಗಾರಿ ಕೈಗೊಳ್ಳಲು ಒತ್ತಾಯಿಸಿ ಸರ್ಕಾರದ ಸಚಿವರು, ಶಾಸಕರು, ವಿವಿಧ ಹಂತದ ಅಧಿಕಾರಿಗಳಿಗೆ ಒಟ್ಟು 37 ಮನವಿಗಳನ್ನು ನೀಡಲಾಗಿದೆ. ಯಾವುದಕ್ಕೂ ಸ್ಪಂದನೆ ನೀಡುತ್ತಿಲ್ಲ. ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ, ಗಂಡಿ ಕೆರೆ ಅಭಿವೃದ್ಧಿ, ಎಸ್‌ಸಿ/ಎಸ್‌ಟಿ ಅನುದಾನ, ಪ್ರಾಕೃತಿಕ ವಿಕೋಪಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ. ಜನರು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದರು.

ಉಳ್ಳಾಲ ನಗರಸಭೆಗೆ 2 ವರ್ಷದಿಂದ ಸುಮಾರು 60 ಕೋ.ರೂ. ಅನುದಾನ ಬಂದರೂ 18ನೇ ವಾರ್ಡ್‌ಗೆ ಒಂದು ರೂಪಾಯಿ ಕೂಡಾ ಮೀಸಲಿಟ್ಟಿಲ್ಲ. ಸರಿಯಾದ ರಸ್ತೆ ಇಲ್ಲದೆ ಆಂಬ್ಯುಲೆನ್ಸ್ ಸಂಚರಿಸಲೂ ಸಾಧ್ಯವಾಗದ ಸ್ಥಿತಿ ಇದೆ. ಸಂಬಂಧಪಟ್ಟವರು ಸ್ಪಂದಿಸದಿದ್ದರೆ ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News