ಬೆಳಪು ಬಡವರಿಗೆ ಹಕ್ಕುಪತ್ರ ನೀಡುವುದು ಜನಪ್ರತಿನಿಧಿಗಳ ಕರ್ತವ್ಯ : ದೇವಿಪ್ರಸಾದ್ ಶೆಟ್ಟಿ

Update: 2020-10-16 17:06 GMT

ಪಡುಬಿದ್ರಿ: ಕಾಪು ತಾಲೂಕಿನ ಬೆಳಪು ಗ್ರಾಮದಲ್ಲಿ ಕಳೆದ 5 ದಶಕಗಳಿಂದ ಸರಕಾರಿ ನಿವೇಶನದಲ್ಲಿ ವಾಸಿಸುವ ಜನರಿಗೆ 'ಪಂಚಾಯತ್ ಕಾಡು' ಎಂದು ಸಬೂಬು ನೀಡಿ ಹಕ್ಕುಪತ್ರಗಳನ್ನು ಬಡವರಿಗೆ ನೀಡದೆ ಸರಕಾರಿ ಸವಲತ್ತುಗಳಿಂದ ವಂಚಿಸುತ್ತಿದ್ದಾರೆ ಬೆಳಪು ಗ್ರಾಮ ಪಂ. ಮಾಜಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಬೆಳಪು ಆರೋಪಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಕಳೆದ 25 ವರ್ಷಗಳಲ್ಲಿ 800ಕ್ಕೂ ಮಿಕ್ಕಿ ಬಡ ಜನರಿಗೆ ಒಂದೇ ಗ್ರಾಮದಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸಿದ್ದೇವೆ.  ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಇಚ್ಛಾಶಕ್ತಿ ಇದ್ದರೆ ರಾಜಕೀಯ ಮರೆತು ಬಡವರಿಗೆ ನ್ಯಾಯ ಒದಗಿಸಿ ಕೊಡಿ ಎಂದು ಒತ್ತಾಯಿಸಿದ್ದಾರೆ.

ನಮ್ಮ ಗ್ರಾಮದಲ್ಲಿ ಯಾವುದೇ ಕಾಡು ಅಥವಾ ಮರಗಿಡಗಳಿಲ್ಲದ ಸಮತಟ್ಟು ಪ್ರದೇಶದಲ್ಲಿ ಹಲವು ದಶಕಗಳಿಂದ ಮನೆ ನಿರ್ಮಿಸಿ ಮೂರು ತಲೆಮಾರುಗಳಿಂದ ಜೀವಿಸುತ್ತಿರುವ ಜನರಿಗೆ ಅಧಿಕಾರಿಗಳು ಹಕ್ಕುಪತ್ರ ನೀಡಿಲ್ಲ. ಈ ಬಗ್ಗೆ ನಾನು ಕಳೆದ 20 ವರ್ಷಗಳಿಂದ ವಿವಿಧ ಮುಖ್ಯ ಮಂತ್ರಿಗಳು, ಕಂದಾಯ ಸಚಿವರು, ಉಸ್ತುವಾರಿ ಸಚಿವರು, ಶಾಸಕರು ಜಿಲ್ಲಾಧಿಕಾರಿಗಳಿಗೆ ನಮ್ಮೆಲ್ಲಾ ಹಳೆಯ ಕಡತಗಳೊಂದಿಗೆ ಭೇಟಿ ನೀಡಿ ಮನವರಿಕೆ ಮಾಡಿದರೂ ಹಕ್ಕುಪತ್ರ ನೀಡುವಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ವಿಪರ್ಯಾಸವೆಂದು ಶೆಟ್ಟಿ ದೂರಿದ್ದಾರೆ.

ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೆ ನಡೆಸಿ ಯಾವುದೇ ಮರಗಿಡಗಳು ಇಲ್ಲಿ ಇರುವುದಿಲ್ಲ. ಕಳೆದ 30 ವರ್ಷಗಳೂ ಮೇಲ್ಪಟ್ಟು ಜೀವಿಸುತ್ತಿರುವ ಲಕ್ಷಣಗಳು ಕಂಡುಬರುತ್ತದೆಂದು ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದರೂ ಕ್ರಮ ಕೈಗೊಂಡಿಲ್ಲ. ಬಡವರಿಗೊಂಡು ಬಂಡವಾಳಶಾಹಿಗಳಿಗೊಂದು ಕಾನೂನು ರೂಪಿಸಿರುವ ಅಧಿಕಾರಿಗಳು 'ಪಂಚಾಯತ್ ಕಾಡು' ಪ್ರದೇಶವನ್ನು ಕಡಿಮೆ ಮೌಲ್ಯಕ್ಕೆ ಮಾರಾಟ ಮಾಡಿರುವ ದಾಖಲೆಗಳನ್ನು ನೀಡಿರುತ್ತೇವೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News