ದ.ಕ. ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಆಡಳಿತ ಪಕ್ಷದ ಶಾಸಕ ಶಾಮೀಲು: ರಮಾನಾಥ ರೈ ಆರೋಪ

Update: 2020-10-17 05:58 GMT

ಮಂಗಳೂರು, ಅ.17: ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು, ಇದರಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರ ಕೈವಾಡವಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆರೋಪಿಸಿದ್ದಾರೆ.

ಪಕ್ಷದ ಜಿಲ್ಲಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಣಾಜೆ ಸಮೀಪದ ಮುಡಿಪು, ಬಾಳೆಪುಣಿ, ಇನೋಳಿ ಪರಿಸರದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಇದರಿಂದ ಸುಮಾರು 50 ಕೋ.ರೂ. ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ಈ ದಂಧೆಯಲ್ಲಿ ಸ್ಥಳೀಯರಲ್ಲದೆ ತಮಿಳುನಾಡು, ಆಂಧ್ರ ಪ್ರದೇಶ, ಕೇರಳದವರು ಕೂಡ ಶಾಮೀಲಾಗಿದ್ದಾರೆ ಎಂದು ತಿಳಿಸಿದರು.

ಆಡಳಿತ ಪಕ್ಷದ ಶಾಸಕರೊಬ್ಬರ ಸಂಬಂಧಿಕರು ಬಡಗ ಎಡಪದವು ಗ್ರಾಮದ ಗಂಜಿಮಠದಲ್ಲಿ ಗಣಿಗಾರಿಕೆಗೆ ಪರವಾನಿಗೆ ಪಡೆದು ಮುಡಿಪುವಿನಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇದು ಆಡಳಿತ ಪಕ್ಷದ ಶಾಸಕರಿಗೆ, ಜಿಲ್ಲಾಡಳಿತಕ್ಕೆ ಸರಕಾರಕ್ಕೂ ತಿಳಿದ ವಿಚಾರವಾಗಿದೆ. ಮುಡಿಪು ಪರಿಸರದಲ್ಲಿ ನಡೆಯುವ ದಂಧೆಗೆ ಈಗಾಗಲೆ ಮಂಗಳೂರು ಸಹಾಯಕ ಆಯುಕ್ತರು ದಾಳಿ ಮಾಡಿ ಕ್ರಮ ಜರುಗಿಸಿದ್ದರು. ಆದರೆ ಅವರನ್ನೇ ವರ್ಗಾಯಿಸಲಾಗಿದೆ. ಬಳ್ಳಾರಿ ಮಾದರಿಯ ಈ ಗಣಿಗಾರಿಕೆಯ ವಿರುದ್ಧ ರಾಜ್ಯ ಸರಕಾರದ ಪ್ರಧಾನ ಕಾರ್ಯದರ್ಶಿಯ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು. ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕು ಎಂದು ರಮಾನಾಥ ರೈ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಬಜಾಲ್, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಡಿಸಿಸಿ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News