ಸುರತ್ಕಲ್‌: ರವಿವಾರದ ಸಂತೆಗೆ ಅವಕಾಶ ನೀಡಲು ಆಗ್ರಹಿಸಿ ಧರಣಿ

Update: 2020-10-17 06:41 GMT

ಮಂಗಳೂರು, ಅ.17: ಸುರತ್ಕಲ್‌ನಲ್ಲಿ ರವಿವಾರ ದಿನದ ಸಂತೆ ವ್ಯಾಪಾರ ನಡೆಸಲು ತಕ್ಷಣವೇ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಸಂತೆ ವ್ಯಾಪರಸ್ಥರ ಒಕ್ಕೂಟದ ವತಿಯಿಂದ ಶನಿವಾರ ಲಾಲ್ ಬಾಗ್ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಯಿತು.

ಸುರತ್ಕಲ್‌ನಲ್ಲಿ ಕಳೆದ 30 ವರ್ಷಗಳಿಂದ ಬುಧವಾರದ ಸಂತೆಯ ಜೊತೆಗೆ ರವಿವಾರ ಸಂತೆಯೂ ಚಾಲ್ತಿಯಲ್ಲಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಇದನ್ನು ನಿಲ್ಲಿಸಲಾಗಿತ್ತು. ಸದ್ಯ ಬುಧವಾರ ಮಾತ್ರ ಸಂತೆ ವ್ಯಾಪಾರಕ್ಕೆ ಅವಕಾಶ ಕೊಡಲಾಗಿದೆ. ರವಿವಾರದ ಸಂತೆ ವ್ಯಾಪಾರ ಸ್ಥಗಿತವಾಗಿರುವುದರಿಂದ, ಕೇವಲ ಸಂತೆ ವ್ಯಾಪಾರದಿಂದಲೇ ಜೀವನ ನಡೆಸುವ ಸಂತೆ ವ್ಯಾಪಾರಸ್ಥರ ದೈನಂದಿನ ಜೀವನವು ಅಡಕತ್ತರಿಗೆ ಸಿಲುಕಿದಂತಾಗಿರುತ್ತದೆ. ಆದ್ದರಿಂದ ಮತ್ತೆ ರವಿವಾರದ ಸಂತೆಗೆ ಅವಕಾಶ ಮಾಡಿಕೊಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ಶಾಸಕ ಯು.ಟಿ ಖಾದರ್, ಇಂಟಕ್ ಜಿಲ್ಲಾ ಅಧ್ಯಕ್ಷ ಮನೋಹರ್ ಶೆಟ್ಟಿ, ಯುವ ಇಂಟಕ್ ಕಾರ್ಯದರ್ಶಿ ದಿನಕರ್ ಶೆಟ್ಟಿ ಮಾತನಾಡಿ, ಮನಪಾ ಕೊರೋನ ಬಳಿಕ ಬಡವರ ಬದುಕಿನ ಹಾದಿಯನ್ನು ಬಂದ್ ಮಾಡುತ್ತಿದೆ. ಕೊರೋನ ನಿಯಮಾವಳಿಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಪುನೀತ್, ವಿನೋದ್ ರಾಜ್ ಪಣಂಬೂರು, ವ್ಯಾಪಾರಸ್ಥರ ಒಕ್ಕೂಟದ ಮುಹಮ್ಮದ್, ಅಸ್ಗರ್, ಬದ್ರುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News