ಮಧ್ಯ ಪ್ರದೇಶದ ಮನ್‍ರೇಗಾ ಕಾರ್ಡ್ ಗಳಲ್ಲಿ ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಚಿತ್ರಗಳು!

Update: 2020-10-17 07:28 GMT
ದೀಪಿಕಾ ಪಡುಕೋಣೆ, ಜಾಕ್ವೆಲಿನ್ ಫೆರ್ನಾಂಡಿಸ್

ಭೋಪಾಲ್ : ಮಧ್ಯ ಪ್ರದೇಶ ಸರಕಾರದ ಮನ್‍ರೇಗಾ ದಾಖಲೆಗಳಲ್ಲಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ಜಾಕ್ವೆಲಿನ್  ಫೆರ್ನಾಂಡಿಸ್ ಅವರ ಭಾವಚಿತ್ರಗಳೂ ಸೇರಿಕೊಂಡಿವೆ.  ಈ ದಾಖಲೆಗಳ ಪ್ರಕಾರ ಖರ್ಗೋನೆ ಜಿಲ್ಲೆಯಲ್ಲಿ ಇವರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿದ್ದು ಜೂನ್ ಮತ್ತು ಜುಲೈ ತಿಂಗಳ ವೇತನ ಕೂಡ ಅವರಿಗೆ ಸಂದಾಯವಾಗಿದೆ.

ಝಿರ್ನಿಯಾ ಪಂಚಾಯತ್‍ನಡಿ ಬರುವ ಕುಗ್ರಾಮವಾದ ಪೀರ್ಪಖೇಡಾ ನಾಕ ಎಂಬಲ್ಲಿನ ಕನಿಷ್ಠ 11 ಮನ್‍ರೇಗಾ ಫಲಾನುಭವಿಗಳ ಉದ್ಯೋಗ ಕಾರ್ಡ್ ಗಳಲ್ಲಿ ಈ ನಟಿಯರ ಚಿತ್ರಗಳು ಇದ್ದು ಇವು ಆನ್‍ಲೈನ್‍ನಲ್ಲಿ ಅಪ್‍ಲೋಡ್ ಕೂಡ ಆಗಿವೆ. ಮಹಿಳೆಯರ ಉದ್ಯೋಗ ಕಾರ್ಡ್ ಮಾತ್ರವಲ್ಲದೆ ಪುರುಷರ ಉದ್ಯೋಗ ಕಾರ್ಡ್ ಗಳಲ್ಲಿಯೂ ದೀಪಿಕಾ ಮತ್ತು ಜಾಕ್ವೆಲಿನ್ ಅವರ ಚಿತ್ರಗಳಿವೆ.

ಈ ಕುರಿತಂತೆ  ತನಿಖೆಗೆ ಆದೇಶಿಸಲಾಗಿದೆ ಎಂದು  ಖರ್ಗೋನೆ ಕಲೆಕ್ಟರ್ ಅನುಗ್ರಹ ಪಿ ಹೇಳಿದ್ದಾರೆ.

ಮೂಲ ಕಾರ್ಡ್ ಗಳಲ್ಲಿ ನೈಜ ಫಲಾನುಭವಿಗಳ ಭಾವಚಿತ್ರಗಳೇ ಇದ್ದರೂ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲಾಗಿರುವ ಭಾವಚಿತ್ರಗಳಲ್ಲಿ ನಟಿಯರ ಭಾವಚಿತ್ರಗಳನ್ನು ಯಾರು ಪೋಸ್ಟ್ ಮಾಡಿದ್ದಾರೆಂಬುದು ಸದ್ಯದ ಪ್ರಶ್ನೆ. ಈ ಕುರಿತು ತನಿಖೆಗೆ ಅಧಿಕಾರಿಗಳ ತಂಡವನ್ನು ಗ್ರಾಮಕ್ಕೆ ಕಳುಹಿಸಿಕೊಡಲಾಗಿದೆ ಎಂದು ಖರ್ಗೋನೆ ಜಿಲ್ಲಾ ಪಂಚಾಯತ್ ಸಿಇಒ ಗೌರವ್ ಬೆನಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News