ಎರಡೇ ವಾರಗಳಲ್ಲಿ 73,39 ಲಕ್ಷ ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ವಶ; ನಾಲ್ವರು ಸೆರೆ

Update: 2020-10-17 14:22 GMT

ಉಡುಪಿ, ಅ.17: ಉಡುಪಿಯನ್ನು ಮಾದಕ ವಸ್ತು ಮುಕ್ತ ಜಿಲ್ಲೆಯನ್ನಾಗಿಸುವ ಗುರಿಯೊಂದಿಗೆ ಕಾರ್ಯಾಚರಣೆಗೆ ಇಳಿದಿರುವ ಉಡುಪಿ ಜಿಲ್ಲಾ ಪೊಲೀಸರು, ಕಳೆದ ಎರಡು ವಾರಗಳ ಅವಧಿಯಲ್ಲಿ ಯುರೋಪ್ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಒಟ್ಟು 73,39,500ರೂ. ಮೌಲ್ಯದ ಸಿಂಥೆಟಿಕ್ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೂರು ಪ್ರಕರಣಗಳಲ್ಲಿ ಒಟ್ಟು ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಡುಪಿ ಎಸ್ಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ವಿಷ್ಣುವರ್ಧನ್ ಈ ಕುರಿತು ಮಾಹಿತಿ ನೀಡಿದರು. ಆರೋಪಿಗಳು ಡಾರ್ಕ್‌ವೆಬ್ ಮೂಲಕ ಬಿಡ್‌ಕಾಯಿನ್‌ನಲ್ಲಿ ಈ ಡ್ರಗ್ಸ್‌ಗಳನ್ನು ಖರೀದಿಸಿಕೊಳ್ಳುತ್ತಿದ್ದು, ಈ ಬಗ್ಗೆ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬಳು ವಿದ್ಯಾರ್ಥಿನಿ ಕೂಡ ಸೇರಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸಿಂಥೆಟಿಕ್ ಡ್ರಗ್ಸ್‌ನ್ನು ವಶಪಡಿಸಿ ಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಾಗಿದೆ ಎಂದರು.

ಬಂಧಿತರಿಂದ 30,57,000ರೂ. ಮೌಲ್ಯದ 540 ಗ್ರಾಂ ತೂಕದ ನಿಷೇಧಿತ ಎಂಡಿಎಂಎ ಎಕ್ಸ್ಟೆಸಿ 1019 ಮಾತ್ರೆಗಳು, 1,000 ಎಲ್.ಎಸ್.ಡಿ. ಸ್ಟ್ಯಾಂಪ್ಸ್, 3,00,000ರೂ. ಮೌಲ್ಯದ 30 ಗ್ರಾಂ ತೂಕದ ಬ್ರೌನ್ ಶುಗರ್, 9,82,500 ರೂ. ಮೌಲ್ಯದ 131 ಗ್ರಾಂ ತೂಕವುಳ್ಳ ಸುಪೀರಿಯರ್ ಕ್ವಾಲಿಟಿ ಹೈಡ್ರೋ ವೀಡ್ ಗಾಂಜಾಗಳನ್ನು ವಶಪಡಿಸಿಕೊಳ್ಳ ಲಾಗಿದೆ.

242 ಪ್ರಕರಣಗಳಲ್ಲಿ 294 ಬಂಧನ

ಜಿಲ್ಲೆಯಲ್ಲಿ ಈ ವರ್ಷ ಅಕ್ಟೋಬರ್ 16ರವರೆಗೆ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 31 ಪ್ರಕರಣಗಳಲ್ಲಿ 61 ಮಂದಿಯನ್ನು ಬಂಧಿಸಿ, 93,46,400 ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸೇವನೆ ಸಂಬಂಧ 211 ಪ್ರಕರಣಗಳಲ್ಲಿ 234 ಮಂದಿಯನ್ನು ಬಂಧಿಸಲಾಗಿದೆ. ಹೀಗೆ ಒಟ್ಟು 242 ಪ್ರಕರಣಗಳಲ್ಲಿ 294 ಮಂದಿಯನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಗಾಂಜಾ ಸೇವನೆಗೆ ಸಂಬಂಧಿಸಿ ಬಂಧಿತರನ್ನು ರಿವರ್ಸ್ ತನಿಖೆಗೆ ಒಳಪಡಿಸಿ ದಾಗ ಇವರಿಗೆ ಗಾಂಜಾ ಮಾರಾಟ ಮಾಡಿದ ಒಟ್ಟು 16 ಮಂದಿಯನ್ನು ಬಂಧಿಸಲಾಗಿದೆ. ಬೈಂದೂರಿನಲ್ಲಿ 5, ಗಂಗೊಳ್ಳಿಯಲ್ಲಿ 4, ಕುಂದಾಪುರದಲ್ಲಿ 2, ಪಡುಬಿದ್ರಿಯಲ್ಲಿ 5 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಹಲವು ಮಂದಿ ಯನ್ನು ಬಂಧಿಸಬೇಕಾಗಿದೆ ಎಂದರು.

ಕಳೆದ 5 ವರ್ಷಗಳಲ್ಲಿ ದಾಖಲಿಸಿದ ಅತಿ ಹೆಚ್ಚು ಪ್ರಕರಣಗಳು ಇದಾಗಿವೆ. ಮುಂದೆ ಬೇಡಿಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ಇಲಾಖೆ ವತಿಯಿಂದ ಮಾಡಲಾಗುವುದು ಎಂದರು. ಉಡುಪಿ ಜಿಲ್ಲಾ ಪೊಲೀಸರ ಈ ಕಾರ್ಯವನ್ನು ಕರ್ನಾಟಕ ರಾಜ್ಯದ ಡಿಜಿ ಮತ್ತು ಐಜಿಪಿ ಹಾಗೂ ಪಶ್ಚಿಮ ವಲಯದ ಐಜಿಪಿಯವರು ಶ್ಲಾಘಿಸಿದ್ದಾರೆ ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಕುಮಾರ ಚಂದ್ರ, ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಕಾರ್ಕಳ ಡಿವೈಎಸ್ಪಿ ಭರತ್ ಎಸ್.ರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.

ಮೂರು ತಂಡಗಳಿಂದ ಕಾರ್ಯಾಚರಣೆ

ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗಾಗಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನ ದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಉಸ್ತುವಾರಿುಲ್ಲಿ 3 ತಂಡಗಳನ್ನು ರಚಿಸಲಾಗಿದೆ.

ತಾಂತ್ರಿಕ ತಂಡದಲ್ಲಿ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್, ಕಾರ್ಕಳ ಡಿವೈಎಸ್ಪಿ ಭರತ್ ಎಸ್.ರೆಡ್ಡಿ, ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ಶಿವಾನಂದ, ನಿತಿನ್, ದಿನೇಶ್, ಕಾರ್ಯಾಚರಣೆ ತಂಡದಲ್ಲಿ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ ಎಂ., ಮಣಿಪಾಲ ಎಸ್ಸೈ ರಾಜಶೇಖರ ವಂದಲಿ, ಸಿಬ್ಬಂದಿಗಳಾದ ಮಣಿಪಾಲ ಠಾಣೆಯ ಶೈಲೇಶ್, ಪ್ರಸನ್ನ, ಥೋಮ್ಸನ್, ಅಬ್ದುಲ್ ರಜಾಕ್, ಆದರ್ಶ, ಸಲ್ಮಾನ್ ಖಾನ್, ಕುಂದಾಪುರ ಠಾಣೆಯ ವಿಜಯ್ ಕುಮಾರ್, ರಾಜು, ಸತೀಶ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುವ ತಂಡದಲ್ಲಿ ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್, ವೃತ್ತ ನಿರೀಕ್ಷಕರುಗಳಾದ ಅನಂತ ಪದ್ಮನಾಭ, ಮಹೇಶ್ ಪ್ರಸಾದ್, ಮಂಜುನಾಥ, ಮಂಜಪ್ಪಡಿ.ಆರ್., ಬ್ರಹ್ಮಾವರ ಎಸ್ಸೈ ರಾಘ ವೇಂದ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಎಲ್ಲಾ ದಾಳಿಗಳಲ್ಲಿ ಐಎಸ್‌ಡಿ ಉಡುಪಿ ಘಟಕ ಪೊಲೀಸ್ ನಿರೀಕ್ಷಕ ಮಧು, ಉಡುಪಿ ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ನಾಗರಾಜ್, ಉಡುಪಿ ತಹಶೀಲ್ದಾರ್ ಪ್ರದೀಪ್ ಮತ್ತು ಸಿಬ್ಬಂದಿ ಸಹಕರಿಸಿದ್ದಾರೆ.

ಜಿಲ್ಲೆಗೆ ಮಾದಕ ವಸ್ತುಗಳು ಸಮುದ್ರ, ವಿಮಾನ ಅಥವಾ ರಸ್ತೆ ಮೂಲಕ ಬರುತ್ತಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರೆಯುತ್ತಿದೆ. ಪಬ್ಸ್, ಹೊಟೇಲ್‌ಗಳಲ್ಲಿ ನಡೆಯುವ ಪಾರ್ಟಿಗಳಲ್ಲಿ ಮಾದಕ ವಸ್ತು ಬಳಕೆ ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾಲಕರಿಗೆ ಎಚ್ಚರಿಕೆ ನೀಡಲಾಗಿದೆ. ಈ ಬಗ್ಗೆ ಅಬಕಾರಿ ಜಿಲ್ಲಾ ಅಧಿಕಾರಿ ಜೊತೆ ಸಭೆ ನಡೆಸಲಾಗಿದೆ. ಡಿಸಿ ಜೊತೆ ಕೂಡ ಈ ಮಾಹಿತಿಯನ್ನು ಹಂಚಿಕೊಂಡಿದ್ದೇವೆ.
-ವಿಷ್ಣುವರ್ಧನ್, ಎಸ್ಪಿ, ಉಡುಪಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News