ಮುಡಿಪು ಪರಿಸರದಲ್ಲಿ ರೆಡ್ ಬಾಕ್ಸೈಟ್ ದಂಧೆ : ಉನ್ನತ ತನಿಖೆಗೆ ರೈ ಆಗ್ರಹ

Update: 2020-10-17 12:37 GMT

ಮಂಗಳೂರು, ಅ.17: ಕೊಣಾಜೆ ಸಮೀಪದ ಮುಡಿಪು, ಬಾಳೆಪುಣಿ, ಇನ್ನೋಳಿ ಬಳಿ ಅಕ್ರಮ ರೆಡ್ ಬಾಕ್ಸೈಟ್ ಗಣಿಗಾರಿಕೆಯು ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪರಿಸರದಲ್ಲಿ ಸ್ಥಳೀಯರೊಂದಿಗೆ ಸೇರಿಕೊಂಡು ಕೇರಳ, ತಮಿಳುನಾಡು, ಆಂಧ್ರಪ್ರದೇಶದ ಧಂದೆಕೋರರು ಅಕ್ರಮವಾಗಿ ರೆಡ್ ಬಾಕ್ಸೈಟ್ ಸಾಗಾಟ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ಈ ದಂಧೆಕೋರರು ಪ್ರಭಾವ ಬೀರುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ, ಆಡಳಿತ ಪಕ್ಷದ ಜನಪ್ರತನಿಧಿಗಳು ಹಾಗೂ ಸರಕಾರಕ್ಕೆ ಮಾಹಿತಿ ಇದೆ. ಆದರೆ, ದಂಧೆಗೆ ಕಡಿವಾಣ ಹಾಕಲು ಮುಂದಾಗಿಲ್ಲ. ಹಾಗಾಗಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಬಳ್ಳಾರಿಯಲ್ಲಿ ನಡೆದಿದ್ದ ಗಣಿಗಾರಿಕೆಗೂ ಇದಕ್ಕೂ ಸಾಮ್ಯತೆ ಇದೆ. ಮನೆ ಕಟ್ಟಲು ಐದು ಸೆಂಟ್ಸ್ ಜಾಗದಲ್ಲಿ ಕೆಂಪು ಕಲ್ಲು ಕಡಿಯಲೆಂದು ಪರ್ಮಿಟ್ ಪಡೆದವರೂ ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಗಂಜಿಮಠ ಸಮೀಪದ ಬಡಗ ಎಡಪದವು ಗ್ರಾಮದಲ್ಲಿ ಕಲ್ಲು ಕೋರೆಗೆ ಪರ್ಮಿಟ್ ಪಡೆದಿದ್ದ ಶಾಸಕರೊಬ್ಬರ ಸಂಬಂಧಿಯು ಆ ಪರ್ಮಿಟ್ ದುರ್ಬಳಕೆ ಮಾಡಿಕೊಂಡು ಮುಡಿಪು ಬಳಿ ಗಣಿಕಾರಿಕೆ ನಡೆಸುತ್ತಿದ್ದಾರೆ ಎಂದು ರಮಾನಾಥ ರೈ ಆಪಾದಿಸಿದರು.

ಒಂದು ಟನ್ ರೆಡ್ ಬಾಕ್ಸೈಟ್ ದರ 2,500 ರೂ. ಇದೆ. ಇದರ ಶೇ.5 ರಾಜಸ್ವ ಕಟ್ಟಬೇಕು. ನಕಲಿ ಪರ್ಮಿಟ್ ಮೂಲಕ ತೆರಿಗೆ ವಂಚನೆ ಮಾಡಿರುವುದರಿಂದ ಸರಕಾರಕ್ಕೆ ಸುಮಾರು 50 ಕೋ.ರೂ. ನಷ್ಟವಾಗಿರಬಹುದು. ಈ ಹಿಂದಿನ ಎಸಿ ದಾಳಿ ನಡೆಸಿ ಹಲವು ಲಾರಿಗಳನ್ನು ಜಪ್ತಿ ಮಾಡಿದ್ದರು, ಅವರ ವರ್ಗಾವಣೆಗೆ ಬೇರೆ ಕಾರಣ ಇರಬಹುದು. ಆದರೆ ಇದರಿಂದ ತನಿಖೆ ಮೇಲೆ ಪರಿಣಾಮ ಬೀರಲಿದೆ ಎಂದರು.

ಗಣಿಗಾರಿಕೆಯಿಂದ ತೊಂದರೆಯಾಗುತ್ತಿದೆ ಎಂದು ಇನ್ಫೋಸಿಸ್ ಸಂಸ್ಥೆಯು ಲೋಕಾಯುಕ್ತಕ್ಕೆ ದೂರು ನೀಡಿದೆ. ಅಲ್ಲದೆ ಸಾರ್ವಜನಿಕರ ಓಡಾಟಕ್ಕೆ ಕಷ್ಟವಾಗಲಿದೆ. ಪರಿಸರದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಅದನ್ನು ನಿಲ್ಲಿಸುವುದೇ ಸೂಕ್ತ. ಇಲ್ಲದಿದ್ದರೆ ಬಳ್ಳಾರಿ ಗಣಿಗಾರಿಕೆ ನಿಲ್ಲಿಸಲು ಮಾಡಿದ್ದ ಪ್ರತಿಭಟನೆ ಮಾದರಿ ಹೋರಾಟ ನಡೆಸಬೇಕಾದೀತು ಎಂದು ರಮಾನಾಥ ರೈ ಎಚ್ಚರಿಸಿದರು.

ಈಗಾಗಲೆ ಜಿಲ್ಲಾಧಿಕಾರಿ ಈ ಬಗ್ಗೆ ತನಿಖೆ ನಡೆಸಲು ಏಳು ಜನರ ಸಮಿತಿ ರಚಿಸಿದ್ದಾರೆ. ಇದರ ಜತೆಗೆ ಉನ್ನತ ಮಟ್ಟದ ತನಿಖೆಯೂ ಆಗಬೇಕು. ಅವಾಗ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮನಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಡಿಸಿಸಿ ಪ್ರಧಾನ ಕಾರ್ಯದರ್ಶಿ ನೀರಜ್‌ಪಾಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News