ಸಂಸದ ನಳಿನ್ 2 ಸಾವಿರ ರೂ.ಗೆ ಮರಳು ಒದಗಿಸಲಿ : ಶಾಸಕ ಖಾದರ್ ಒತ್ತಾಯ

Update: 2020-10-17 12:42 GMT

ಮಂಗಳೂರು, ಅ.17: ಸಂಸದ ನಳಿನ್ ಕುಮಾರ್ ಕಟೀಲ್ 2 ಸಾವಿರ ರೂ.ಗೆ ಮರಳು ಒದಗಿಸುವುದಾಗಿ ಭರವಸೆ ನೀಡಿ ತಿಂಗಳು ಕಳೆದಿದೆ. ಇನ್ನೂ ಕೊಟ್ಟ ಭರವಸೆಯನ್ನು ಅವರು ಈಡೇರಿಸಿಲ್ಲ. ಈಗಾಗಲೆ ಮರಳು ಇಲ್ಲದೆ ಕಟ್ಟಡ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡ ಕೂಲಿ ಕಾರ್ಮಿಕನಿಂದ ಹಿಡಿದು ಇಂಜಿನಿಯರ್‌ವರೆಗಿನ ಕುಟುಂಬವು ಸಂಕಷ್ಟದಲ್ಲಿದೆ. ಇದನ್ನು ಮನಗಂಡು ಸಂಸದರು ಶೀಘ್ರ 2 ಸಾವಿರ ರೂ.ಗೆ ಮರಳು ಒದಗಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ದ.ಕ.ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದು ಒಂದುವರೆ ವರ್ಷ ಗಳಾಗುತ್ತಾ ಬಂದಿದೆ. ಈಗಾಗಲೆ ಮನೆ ಸಹಿತ ಕಟ್ಟಡಗಳ ನಿರ್ಮಾಣಕ್ಕೆ ಮರಳು ಪೂರೈಕೆಯ ವ್ಯವಸ್ಥೆ ಮಾಡಬೇಕಿತ್ತು. ಆದರೆ ಬಿಜೆಪಿ ಜನಪ್ರತಿ ನಿಧಿಗಳು ಅದನ್ನು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಇದೀಗ ಕರಾವಳಿಗೆ ಪ್ರತ್ಯೇಕ ನೀತಿ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ. ಕರಾವಳಿ ಏನು, ಕರ್ನಾಟಕದಿಂದ ಹೊರತಾಗಿದೆಯೇ ಎಂದು ಪ್ರಶ್ನಿಸಿದರಲ್ಲದೆ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಮರಳುಗಾರಿಕೆ ಪುನರಾರಂಭಿಸುವುದಕ್ಕೆ ಸಂಬಂಧಿಸಿ ಸಭೆ ಕರೆಯಬೇಕು ಮತ್ತು ಶೀಘ್ರ ಜನಸಾಮಾನ್ಯರಿಗೆ ಮರಳು ಸಿಗುವಂತೆ ಮಾಡ ಬೇಕೆಂದು ಆಗ್ರಹಿಸಿದರು.

ಶಿಕ್ಷಣ ನೀತಿ ರೂಪಿಸಿ: ರಾಜ್ಯ ಸರಕಾರವು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುತ್ತಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಶಿಕ್ಷಣಕ್ಕೆ ಸಂಬಂ ಧಿಸಿ ಏನೆಲ್ಲಾ ಮಾಡಬಹುದು ಎಂಬ ಸ್ಪಷ್ಟತೆ ಇನ್ನೂ ಸರಕಾರಕ್ಕೆ ಇಲ್ಲ. ದಿನಕ್ಕೊಂದು ಹೇಳಿಕೆ ನೀಡುವುದರಿಂದ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ಮಂಡಳಿಯ ಮುಖ್ಯಸ್ಥರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ. ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ಮೈಲು ಗಲ್ಲಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ವೇತನ ನೀಡಲಾಗದೆ ಇತರರ ಮುಂದೆ ಕೈಚಾಚುವಂತಾಗಿದೆ. ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಡ್ಡಿರಹಿತ ಸಾಲ ನೀಡಬೇಕು. ಒಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡದೆ ಸರಕಾರ ಈ ಬಗ್ಗೆ ಸೂಕ್ತ ನಿಯಮ ರೂಪಿಸಬೇಕು ಎಂದು ಖಾದರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಶಕುಂತಳಾ ಶೆಟ್ಟಿ, ಪಕ್ಷದ ಮುಖಂಡರಾದ ಸಂತೋಷ್ ಕುಮಾರ್ ಶೆಟ್ಟಿ, ನೀರಜ್‌ಪಾಲ್, ಟಿ.ಕೆ.ಸುಧೀರ್, ಶುಭೋದಯ ಆಳ್ವ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News