ಕ್ಲಬ್‌ಗಳ ಪುನರಾರಂಭಕ್ಕೆ ಅನುಮತಿ: ಅಸೋಸಿಯೇಶನ್

Update: 2020-10-17 12:45 GMT

ಮಂಗಳೂರು, ಅ.17: ನಗರದಲ್ಲಿ ರಿಕ್ರಿಯೇಷನ್ ಕ್ಲಬ್‌ಗಳನ್ನು ಆರಂಭಿಸಲು ಸಂಬಂಧಪಟ್ಟ ಇಲಾಖೆಗಳು ಅನುಮತಿ ನೀಡಿದ್ದು ಸೋಮವಾರ ದಿಂದ ಕ್ಲಬ್‌ಗಳು ಪುನರಾಂಭಗೊಳ್ಳಲಿವೆ ಎಂದು ಕುಡ್ಲ ರಿಕ್ರಿಯೇಷನ್ ಕ್ಲಬ್ ಮೆಂಬರ್ಸ್‌ ಅಸೋಸಿಯೇಶನ್ ಅಧ್ಯಕ್ಷ ಪ್ರಕಾಶಚಂದ್ರ ರೈ ಹಾಗೂ ಕಾನೂನು ಸಲಹೆಗಾರ ಮೋಹನ್‌ದಾಸ್ ರೈ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡು ವರ್ಷಗಳ ಹಿಂದೆ ಯಾವುದೋ ಒಂದು ನೋಂದಣಿ ಯಾಗದ ಕ್ಲಬ್ ಕಾನೂನು ಬಾಹಿರ ಚಟುವಟಿಕೆ ನಡೆಸಿದ್ದರಿಂದ ಆ ಕ್ಲಬ್ ಮೇಲೆ ದಾಳಿ ನಡೆಯಿತು. ಈ ಬಗ್ಗೆ ಸೃಷ್ಟಿಯಾದ ತಪ್ಪು ಮಾಹಿತಿಯಿಂದ ಕ್ಲಬ್‌ಗಳಿಗೆ ಕೆಟ್ಟ ಹೆಸರು ಬಂತು. ಕ್ಲಬ್‌ಗಳನ್ನು ಮುಚ್ಚುವಂತಾಯಿತು. ಅನಂತರ ಕೊರೋನ, ಸರಕಾರದ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕ್ಲಬ್‌ಗಳನ್ನು ಪುನರಾರಂಭಿಸಲು ಸಾಧ್ಯವಾಗಲಿಲ್ಲ. ಒಂದು ಕ್ಲಬ್ ಹೊರತುಪಡಿಸಿ ಇತರೆ ಕ್ಲಬ್‌ಗಳು ಕಾನೂನು ಬಾಹಿರವಾಗಿ ಕಾರ್ಯ ನಿರ್ವಹಿಸಿಲ್ಲ ಎಂಬುದನ್ನು ಇಲಾಖೆಗಳಿಗೆ ಮನವರಿಕೆ ಮಾಡಲಾಗಿದೆ. 2014ರ ಅಕ್ಟೋಬರ್ 29ರಂದು ಪೊಲೀಸ್ ಆಯುಕ್ತರು ನೋಂದಾಯಿತ ಕ್ಲಬ್‌ಗಳಿಗೆ ಅನುಮತಿ ಪತ್ರದ ಅಗತ್ಯವಿಲ್ಲ ಎಂದಿದ್ದಾರೆ. ಸಹಕಾರಿ ಸಂಘದ ಉಪನಿಬಂಧಕರು ಕೆಲವು ನಿಬಂಧನೆಗಳೊಂದಿಗೆ ಕಾನೂನು ರೀತಿಯಲ್ಲಿ ಕ್ಲಬ್ ನಡೆಸಲು ಅನುಮತಿ ನೀಡಿದ್ದಾರೆ. ನೋಂದಾಯಿತ ಕ್ಲಬ್‌ಗಳಲ್ಲಿ ಕೇರಂ, ಚೆಸ್, ರಮ್ಮಿ ಮನೋರಂಜನಾ ಆಟಗಳು ಮಾತ್ರ ಇರುತ್ತವೆ. ಜೂಜು ಅಥವಾ ಇತರೆ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಇಲಾಖೆ ಸೂಚನೆಯಂತೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ತಿಳಿಸಿದರು.

ಅಸೋಸಿಯೇಶನ್‌ನಲ್ಲಿ 15 ಕ್ಲಬ್‌ಗಳಿವೆ. ಇವುಗಳು ಕರ್ನಾಟಕ ಸೊಸೈಟಿ ಕಾಯ್ದೆ 1960ರ ಪ್ರಕಾರ ನೋಂದಣಿಯಾಗಿವೆ. ಮಂಗಳೂರಿನಲ್ಲಿ 25 ವರ್ಷಗಳಿಂದ ರಿಕ್ರಿಯೇಷನ್ ಕ್ಲಬ್‌ಗಳು ಕಾನೂನಿನ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಕಾಯಿದೆ, ಸುತ್ತೋಲೆ ಪ್ರಕಾರ ಸಭೆ, ವಾರ್ಷಿಕ ವರದಿ, ಆಡಳಿತ ಸಮಿತಿ ರಚನೆ, ಲೆಕ್ಕ ಪರಿಶೋಧನೆ ನಡೆಯುತ್ತಿದೆ ಎಂದು ಮೋಹನ್‌ದಾಸ್ ರೈ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ರಿತೇಶ್ ಬಂಗೇರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News