ಉಡುಪಿ: ಮಾಸ್ಕ್ ಧರಿಸದ ಸರಕಾರಿ ಬಸ್ ನಿರ್ವಾಹಕನಿಗೆ ದಂಡ ವಿಧಿಸಿದ ಜಿಲ್ಲಾಧಿಕಾರಿ !

Update: 2020-10-17 14:20 GMT

ಉಡುಪಿ, ಅ.17: ಸರಕಾರಿ ಬಸ್ಸೊಂದರಲ್ಲಿ ಮಾಸ್ಕ್ ಧರಿಸದೆ ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕನಿಗೆ ಉಡುಪಿ ಜಿಲ್ಲಾಧಿಕಾರಿಯೇ ದಂಡ ವಿಧಿಸಿ ಎಚ್ಚರಿಕೆ ನೀಡಿದ ಘಟನೆ ನಗರದ ಕೋರ್ಟ್ ರಸ್ತೆಯಲ್ಲಿ ಇಂದು ನಡೆದಿದೆ.

ಉಡುಪಿ ಕೋರ್ಟ್ ಆವರಣದಲ್ಲಿ ಶನಿವಾರ ನಡೆದ ಕೋವಿಡ್ ಜನಾಂದೋಲನದ ಪ್ರಯುಕ್ತ ನಗರದ ಕೋರ್ಟ್ ರಸ್ತೆಯ ವಸತಿ ಸಂಕೀರ್ಣದ ಮನೆಗೆ ‘ನನ್ನ ಕುಟುಂಬ ನನ್ನ ಜವಾಬ್ದಾರಿ’ ಅಭಿಯಾನದ ಸ್ಟಿಕರ್ ಅಳವಡಿಸಿ ರಸ್ತೆ ದಾಟಲು ಬಂದ ಜಿಲ್ಲಾಧಿಕಾರಿ ಜಿ.ಜಗದೀಶ್, ರಸ್ತೆಯಲ್ಲಿ ಹಾದು ಹೋದ ಸರಕಾರಿ ಬಸ್‌ನಲ್ಲಿ ನಿರ್ವಾಹಕ ಮಾಸ್ಕ್ ಧರಿಸದೆ ಇರುವುದನ್ನು ಗಮನಿಸಿದರು. ಕೂಡಲೇ ಬಸ್ ನಿಲ್ಲಿಸುವಂತೆ ಸೂಚಿಸಿದ ಡಿಸಿ, ಕಂಡಕ್ಟರ್‌ಗೆ ತಕ್ಷಣ ದಂಡ ವಿಧಿಸುವಂತೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅದೇ ರೀತಿ ವಾಹನದಲ್ಲಿದ್ದ ಇತರ ಪ್ರಯಾಣಿಕರು ಮಾಸ್ಕ್ ಧರಿಸದಿರುವುದನ್ನು ಕಂಡ ಜಿಲ್ಲಾಧಿಕಾರಿ, ಅವರಿಗೂ ದಂಡ ವಿಧಿಸುವಂತೆ ಸೂಚಿಸಿ ದರು. ಈ ಸಂದರ್ಭದಲ್ಲಿ ಮಾಸ್ಕ್ ಧರಿಸದ ನಿರ್ವಾಹಕ ಮತ್ತು ಪ್ರಯಾಣಿಕರನ್ನು ಜಿಲ್ಲಾಧಿಕಾರಿ ತೀವ್ರ ತರಾಟೆಗೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News