12ರ ಹರೆಯದ ಬುಡಕಟ್ಟು ಬಾಲಕಿಯ ಶವ ಪತ್ತೆ: ಸಾಮೂಹಿಕ ಅತ್ಯಾಚಾರ, ಕೊಲೆಯ ಶಂಕೆ

Update: 2020-10-17 14:59 GMT

ರಾಂಚಿ,ಅ.17: ಜಾರ್ಖಂಡ್‌ನ ದುಮಕಾ ಜಿಲ್ಲೆಯ ಗ್ರಾಮವೊಂದರಲ್ಲಿ 12ರ ಹರೆಯದ ಬುಡಕಟ್ಟು ಬಾಲಕಿಯ ಶವವು ಪತ್ತೆಯಾಗಿದ್ದು, ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆಂದು ಶಂಕಿಸಲಾಗಿದೆ. ಪ್ರಕರಣದಕ್ಕೆ ಸಂಬಂಧಿಸಿ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಟ್ಯೂಷನ್‌ಗೆಂದು ಮನೆಯಿಂದ ಹೊರಬಿದ್ದಿದ್ದ ಐದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ಶವವು ಗ್ರಾಮದ ಸಮೀಪ ಪೊದೆಯೊಂದರ ಹಿಂದೆ ಪತ್ತೆಯಾಗಿದೆ. ಮೇಲ್ನೋಟಕ್ಕೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿರುವಂತೆ ಕಂಡು ಬಂದಿದೆ. ಆದರೆ ಮರಣೋತ್ತರ ಪರೀಕ್ಷಾ ವರದಿ ಕೈಸೇರಿದ ಬಳಿಕವೇ ಇದು ದೃಢಪಡಬೇಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಸುದ್ದಿಗಾರರಿಗೆ ತಿಳಿಸಿದರು.

ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು,ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದರು.

 ಇಂತಹ ಪ್ರಕರಣಗಳ ಆರೋಪಿಗಳಿಗೆ ತ್ವರಿತ ನ್ಯಾಯಾಲಯಗಳ ಮೂಲಕ ಶಿಕ್ಷೆಯಾಗುವಂತೆ ನೋಡಿಕೊಳ್ಳುವಂತೆ ಸೊರೇನ್ ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ.

 ರಾಜ್ಯದಲ್ಲಿಯ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯ ಕುರಿತು ಪ್ರತಿಪಕ್ಷ ಬಿಜೆಪಿಯು ಸರಕಾರದ ವಿರುದ್ಧ ದಾಳಿ ನಡೆಸುವುದರೊಂದಿಗೆ ಈ ಘಟನೆಯು ನ.3ರಂದು ಉಪಚುನಾವಣೆ ನಡೆಯಲಿರುವ ಡುಮಕಾ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ವಿವಾದವನ್ನು ಸೃಷ್ಟಿಸಿದೆ. ಕಳೆದ ವಿಧಾನಸಭೆಯಲ್ಲಿ ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿದ್ದ ಸೊರೇನ್ ಬರ್ಹೈತ್ ಕ್ಷೇತ್ರವನ್ನು ಉಳಿಸಿಕೊಂಡು ಡುಮಕಾ ವಿಧಾನಸಭಾ ಕ್ಷೇತ್ರವನ್ನು ತೆರವುಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News