ಉಡುಪಿ: ಲೈಂಗಿಕ ದೌರ್ಜನ್ಯ; ಪ್ರೊಫೆಸರ್ ಅಮಾನತಿಗೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

Update: 2020-10-17 15:31 GMT

ಉಡುಪಿ, ಅ.17: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪ್ರೊ.ಅರಬಿ ಹಾಗೂ ಇದರ ತನಿಖಾ ವರದಿ ಮುಚ್ಚಿಟ್ಟ ಮಾಜಿ ಕುಲಸಚಿವ ಡಾ. ಎ.ಎಂ.ಖಾನ್ ಇವರನ್ನು ಕೆಲಸದಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಉಡುಪಿ ನಗರ ಎಬಿವಿಪಿ ವತಿ ಯಿಂದ ಇಂದು ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ನಗರದ ತಾಲೂಕು ಕಚೇರಿ ಬಳಿ ನಡೆಸಲಾಯಿತು. ಪ್ರತಿಭಟನೆಯಲ್ಲಿ ಉಡುಪಿ ನಗರ ಕಾರ್ಯದರ್ಶಿ ಮಾತನಾಡಿ ಪ್ರಕರಣ ನಡೆದು 2-3 ವರ್ಷಗಳಾದರೂ ಯಾವುದೇ ಕ್ರಮ ಕೈಗೊಳ್ಳದೆ, ವಿದ್ಯಾರ್ಥಿನಿಗೆ ಅನ್ಯಾಯ ಮಾಡಲಾಗುತ್ತಿದೆ. ಅಲ್ಲದೇ ಪ್ರಕರಣದ ವರದಿಯನ್ನು ಮುಚ್ಚಿಟ್ಟ ಆರೋಪಿ ಮಾಜಿ ಕುಲಸಚಿವ ಡಾ.ಎ. ಎಂ.ಖಾನ್ ಅವರು ಇನ್ನೂ ವಿಶ್ವವಿದ್ಯಾನಿಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಇನ್ನಾದರೂ ವಿಶ್ವವಿದ್ಯಾನಿಲಯ ಎಚ್ಚೆತ್ತುಕೊಂಡು ತಕ್ಷಣವೇ ಆರೋಪಿಗಳನ್ನು ಅಮಾನತುಗೊಳಿಸಿ ಸೂಕ್ತವಾದ ತನಿಖೆಯನ್ನು ಮಾಡಿ ಕಠಿಣ ಶಿಕ್ಷೆಯಾಗ ಬೇಕೆಂದು ಒತ್ತಾಯಿಸಿದರು. ಪ್ರತಿಭಟನಕಾರರು ಆರೋಪಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಹಶೀಲ್ದಾರ್ ಅವರಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ವಿದ್ಯಾರ್ಥಿ ನಾಯಕರಾದ ರಾಜ್ಯ ಸಹ ಕಾರ್ಯ ದರ್ಶಿ ಸಂದೇಶ್ ರೈ, ಪ್ರೊ. ಶಿವಾನಂದ ನಾಯಕ್, ತಾಲೂಕು ಸಂಚಾಲಕ ಶ್ರೀಹರಿ, ಸಿದ್ದಾಂತ್, ದರ್ಶನ್, ಆಶೀಶ್, ಶ್ರೇಯಸ್, ಸೂರಜ್ ಮತ್ತಿತರರು ಭಾಗವಹಿಸಿದ್ದರು. ನಂತರ ತಹಶೀಲ್ದಾರ್ ಅವರಿಗೆ ಈ ಬಗ್ಗೆ ಮನವಿಯನ್ನು ಸಲ್ಲಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News