ಕೊರೋನ: ಭಾರತದಲ್ಲಿ ಸ್ಪುಟ್ನಿಕ್ V ಲಸಿಕೆಯ ಕ್ಲಿನಿಕಲ್ ಟ್ರಯಲ್‌ಗೆ ಅನುಮೋದನೆ

Update: 2020-10-17 16:34 GMT

ಮಾಸ್ಕೊ,ಅ.17: ಕೋವಿಡ್-19 ಸೋಂಕಿನ ವಿರುದ್ಧ ರಶ್ಯವು ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ V ಲಸಿಕೆಯ ಕ್ಲಿನಿಕಲ್ ಟ್ರಯಲ್ ಪರೀಕ್ಷೆಯನ್ನು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಸಲು ರಶ್ಯದ ನೇರ ಹೂಡಿಕೆ ನಿಧಿ (ಆರ್‌ಡಿಐಎಫ್) ಹಾಗೂ ಭಾರತೀಯ ಔಷಧಿ ಸಂಸ್ಥೆ ಡಾ. ರೆಡ್ಡಿಸ್ ಲ್ಯಾಬೋರೇಟರೀಸ್ ಲಿಮಿಟೆಡ್‌ಗೆ ನವೀಕೃತ ಅನುಮೋದನೆ ದೊರೆತಿದೆ.

 ಭಾರತದಲ್ಲಿ ಸ್ಪುಟ್ನಿಕ್ V ಲಸಿಕೆಯ ಕ್ಲಿನಿಕಲ್ ಟ್ರಯಲ್ ಪರೀಕ್ಷೆಯನ್ನು ದೊಡ್ಡ ಪ್ರಮಾಣದಲ್ಲಿ ನಡೆಸಲಾಗುವುದೆಂದು ಈ ಹಿಂದೆ ಘೋಷಿಸಲಾಗಿತ್ತು. ಆದರೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಗಳು ಇದಕ್ಕೆ ಸಮ್ಮತಿ ನೀಡದ ಕಾರಣ ನನೆಗುದಿಗೆ ಬಿದ್ದಿತ್ತು. ರಶ್ಯದಲ್ಲಿ ಸ್ಪುಟ್ನಿಕ್ V  ಲಸಿಕೆಯ ಮೊದಲನೆ ಹಂತದ ಹಾಗೂ ಎರಡನೆ ಹಂತದ ಕ್ಲಿನಿಕಲ್ ಟ್ರಯಲ್ ಪರೀಕ್ಷೆಗಳು ಅತ್ಯಂತ ಸಣ್ಣ ಪ್ರಮಾಣದಲ್ಲಿ ನಡೆದಿರುವುದರಿಂದ ಭಾರತದಲ್ಲಿ ತಕ್ಷಣವೇ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ನೀಡಕೂಡದೆಂದು ಅವು ಅಭಿಪ್ರಾಯಿಸಿದ್ದವು.

ಆದರೆ ನೂತನ ಒಪ್ಪಂದದ ಪ್ರಕಾರ ಭಾರದಲ್ಲಿ ಸ್ಪುಟ್ನಿಕ್ V ಲಸಿಕೆಯ ಎರಡನೆ ಹಾಗೂ ಮೂರನೆ ಹಂತದ ಮಾನವ ಕ್ಲಿನಿಕಲ್ ಟ್ರಯಲ್‌ನ್ನು ನಡೆಯಲಿದೆ.

  ರಶ್ಯವು ನೊವೆಲ್ ಕೊರೋನ ವೈರಸ್ ಲಸಿಕೆಯ ಬಳಕೆಗೆ ಶಾಸನಾತ್ಮಕ ಅನುಮೋದನೆಯನ್ನು ಪಡೆದ ಮೊದಲ ರಾಷ್ಟ್ರವಾಗಿದೆ. ಸ್ಪುಟ್ನಿಕ್ V ಲಸಿಕೆಯ ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯು ಬೆಲಾರಸ್, ವೆನೆಝುವೆಲಾ ಹಾಗೂ ಯುಎಇಗಳಲ್ಲಿ ನಡೆಯಲಿದೆ.

 ಲಸಿಕೆಯ 30 ಕೋಟಿ ಶಾಟ್‌ಗಳನ್ನು ಉತ್ಪಾದಿಸಲು ಈಗಾಗಲೇ ಆರ್‌ಡಿಐಎಫ್ ಭಾರತೀಯ ಉತ್ಪಾದಕ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.

ಪ್ರಸಕ್ತ ಸ್ಪುಟ್ನಿಕ್ V ಲಸಿಕೆಯ ಮೂರನೆ ಹಂತದ ಕ್ಲಿನಿಕಲ್ ಟ್ರಯಲ್ ಮಾಸ್ಕೊದಲ್ಲಿ ನಡೆಯುತ್ತಿದ್ದು, 40 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದಾರೆ. 

ನೂತನ ಒಪ್ಪಂದದ ಪ್ರಕಾರ ಭಾರತದಲ್ಲಿ ಸ್ಪುಟ್ನಿಕ್ V  ಲಸಿಕೆಯ ಎರಡನೆ ಹಾಗೂ ಮೂರನೆ ಹಂತದ ಮಾನವ ಕ್ಲಿನಿಕಲ್ ಟ್ರಯಲ್‌ನ್ನು ನಡೆಯಲಿದ್ದು, 1500 ಮಂದಿ ಪಾಲ್ಗೊಳ್ಳಲಿದ್ದಾರೆಂದು ವಿದೇಶದಲ್ಲಿ ಈ ಲಸಿಕೆಯ ಮಾರ್ಕೆಟಿಂಗ್ ಸಂಸ್ಥೆಯಾದ ಆರ್‌ಡಿಐಎಫ್ ತಿಳಿಸಿದೆ. ಭಾರತದ ಪ್ರಸಿದ್ಧ ಔಷಧ ತಯಾರಕ ಸಂಸ್ಥೆಯಾದ ಡಾ. ರೆಡ್ಡೀಸ್ ಸ್ಪುಟ್ನಿಕ್ Vಲಸಿಕೆಯ ಕ್ಲಿನಿಕಲ್ ಟ್ರಯಲ್‌ಗಳನ್ನು ನಡೆಸಲಿದೆ. ಇದಕ್ಕಾಜಿಗಿ ಆರ್‌ಡಿಐಎಫ್ , ಡಾ. ರೆಡ್ಡೀಸ್ ಲ್ಯಾಬೊರೇಟರೀಸ್‌ಗೆ 10 ಕೋಟಿ ಲಸಿಕೆಯ ಡೋಸ್‌ಗಳನ್ನು ಪೂರೈಕೆ ಮಾಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News