ಶಬರಿಮಲೆ ಮುಖ್ಯ ಅರ್ಚಕರಾಗಿ ಜಯರಾಜನ್ ಪೊಟ್ಟಿ ನೇಮಕ
Update: 2020-10-17 22:30 IST
ಶಬರಿಮಲೆ,ಅ.17: ಇಲ್ಲಿಯ ಶಬರಿಮಲೆ ದೇವಸ್ಥಾನದ ‘ಮೇಲ್‌ಶಾಂತಿ (ಮುಖ್ಯ ಅರ್ಚಕ)’ಯಾಗಿ ವಿ.ಕೆ.ಜಯರಾಜನ್ ಪೊಟ್ಟಿ ಅವರನ್ನು ಒಂದು ವರ್ಷದ ಅವಧಿಗೆ ನೇಮಕಗೊಳಿಸಲಾಗಿದೆ. ರಾಜಕುಮಾರ ಎಂ.ಎನ.ನಂಬೂದಿರಿ ಅವರು ಪಕ್ಕದ ಮಲಿಕಪ್ಪುರಂ ದೇವಿ ಆಲಯದ ಮುಖ್ಯ ಅರ್ಚಕರಾಗಿ ನೇಮಕಗೊಂಡಿದ್ದಾರೆ.
ಶಬರಿಮಲೆ ಕ್ಷೇತ್ರದ ಆಡಳಿತವನ್ನು ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯು ಸಂದರ್ಶನ ನಡೆಸಿ ಸಂಭಾವ್ಯ ಮುಖ್ಯ ಅರ್ಚಕರ ಕಿರುಪಟ್ಟಿಯೊಂದನ್ನು ಸಿದ್ಧಗೊಳಿಸಿದ್ದು,ಬಳಿಕ ಲಾಟರಿಯೆತ್ತುವ ಮೂಲಕ ಈ ಆಯ್ಕೆಗಳನ್ನು ಮಾಡಲಾಗಿದೆ.
ಪೊಟ್ಟಿ ಮತ್ತು ನಂಬೂದಿರಿ ಅವರು ಮಲಯಾಳಂ ಕ್ಯಾಲೆಂಡರ್‌ನ ವೃಶ್ಚಿಕಂ ಮಾಸದಿಂದ ಆರಂಭಗೊಳ್ಳುವ 41 ದಿನಗಳ ಮಂಡಳ ಪೂಜಾ ಋತುವಿಗೆ ಮುನ್ನ ನ.16ರಂದು ಅಧಿಕಾರವನ್ನು ಸ್ವೀಕರಿಸಲಿದ್ದಾರೆ ಎಂದು ಟಿಡಿಬಿ ಮೂಲಗಳು ತಿಳಿಸಿವೆ.