ಕೃಷಿ ಕಾನೂನು ಪ್ರತಿಭಟಿಸಿ ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ವಿಂದರ್ ಸಿಂಗ್ ಕಾಂಗ್ ರಾಜೀನಾಮೆ

Update: 2020-10-18 07:23 GMT

ಚಂಡಿಗಢ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಪ್ರತಿಭಟಿಸಿ ಪಂಜಾಬ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ವಿಂದರ್ ಸಿಂಗ್ ಕಾಂಗ್ ಶನಿವಾರ ಪಕ್ಷದ ಪ್ರಾಥಮಿಕ ಸದಸ್ವತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಪಕ್ಷದಲ್ಲಿ ಯಾರೂ ಕೃಷಿ ಕಾನೂನುಗಳ ಬಗ್ಗೆ ತರ್ಕಿಸಲು ಸಿದ್ಧರಿಲ್ಲ ಹಾಗೂ ಹಿರಿಯ ನಾಯಕತ್ವವು ಪಂಜಾಬ್ ಪರ ಮನೋಭಾವವನ್ನು ಹೊಂದಿಲ್ಲ ಎಂದು ಕಾಂಗ್ ಆರೋಪಿಸಿದರು.

ಸುಗ್ರೀವಾಜ್ಞೆಯನ್ನು ಅಂಗೀಕರಿಸಿದಾಗ ನಾನು ರೈತರ ಪ್ರತಿಭಟನೆಯ ವಿಷಯವನ್ನು ಎತ್ತಿದ್ದೇನೆ. ಆ ನಂತರ ಪಕ್ಷದ ಪ್ರಮುಖ ಸಮಿತಿಯ ಸದಸ್ಯನಾಗಿ ಪ್ರತಿ ಸಭೆಯಲ್ಲೂ ರೈತರ ವಿಚಾರ ಎತ್ತುವ ಪ್ರಯತ್ನ ಮಾಡಿದ್ದೇನೆೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ನಾನು ಈ ವಿಷಯವನ್ನು ಎತ್ತಿದ್ದಕ್ಕಾಗಿ ನನ್ನನ್ನು ಪಾಕಿಸ್ತಾನಿ ಎಂದು ಕರೆದರು. ಅವರ ಭಾಷೆಯ ವಿರುದ್ಧ ನಾನು ಪ್ರತಿಭಟಿಸಿದಾಗ ಅವರು ಕ್ಷಮೆಯಾಚಿಸಬೇಕಾಯಿತು. ರೈತರ ಪರವಾಗಿ ಮಾತನಾಡುವವರ ಬಗ್ಗೆ ಬಿಜೆಪಿ ನಾಯಕತ್ವವು ಈ ರೀತಿಯ ಮನೋಭಾವವನ್ನು ಹೊಂದಿದೆ ಎಂದು ಕಾಂಗ್ ಹೇಳಿದ್ದಾರೆ.

ಪಂಜಾಬ್ ವಿವಿ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರಾಗಿದ್ದ ಕಾಂಗ್ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆಪಿ ಸೇರಿದ್ದರು. ಕೆಲವೇ ವರ್ಷಗಳಲ್ಲಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಏರಿದರು. ಪಂಜಾಬ್‌ನಲ್ಲಿ ಬಿಜೆಪಿ ಯಲ್ಲಿರುವ ಬೆರಳೆಣಿಕೆಯಷ್ಟು ಸಿಖ್ ನಾಯಕರಲ್ಲಿ ಅವರು ಕೂಡ ಒಬ್ಬರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News