ಉತ್ತರ ಪ್ರದೇಶ: ನಾಗರಿಕರಲ್ಲಿ ಭೀತಿ ಮೂಡಿಸಿದ 'ಐರನ್ ಮ್ಯಾನ್'!

Update: 2020-10-18 11:24 GMT

Photo: Twitter (@noidapolice)
 

ನೋಯ್ಡಾ: ಕಾಮಿಕ್ ಧಾರಾವಾಹಿಯ ಕಾಲ್ಪನಿಕ ಪಾತ್ರ 'ಐರನ್ ಮ್ಯಾನ್'ನನ್ನು ಹೋಲುವ ಬಲೂನ್ ಆಗಸದಲ್ಲಿ ಕಾಣಿಸಿಕೊಂಡ ಪರಿಣಾಮ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ದಂಕೋರ್ ಪಟ್ಟಣದ ಜನ ಅನ್ಯಗ್ರಹದ ಜೀವಿ ಆಕ್ರಮಣ ನಡೆಸುತ್ತಿದೆ ಎಂದು ಭಯಭೀತರಾದ ಪ್ರಸಂಗ ವರದಿಯಾಗಿದೆ.

ಅನಿಲದಿಂದ ತುಂಬಿದ್ದ ಈ ಬಲೂನ್, ‘ಐರನ್ ಮ್ಯಾನ್’ ರಚನೆಯನ್ನೇ ಹೋಲುತ್ತಿದ್ದು ರೋಬೋಟ್‍ನಂತಿತ್ತು. ಶನಿವಾರ ಮುಂಜಾನೆ ಪಟ್ಟಣದಲ್ಲಿ ಇದು ಕಾಣಿಸಿಕೊಂಡಿದ್ದು, ಬಳಿಕ ಭತ್ತಾ ಪರ್ಸೂಲ್ ಗ್ರಾಮದ ಬಳಿಯ ನಾಲೆಯಲ್ಲಿ ಇಳಿದಿತ್ತು. ಅಲ್ಲಿ ನೆರೆದಿದ್ದ ಜನ ಭಯಭೀತರಾಗಿ ತಮ್ಮ ಪಟ್ಟಣದ ಮೇಲೆ ದಾಳಿ ನಡೆಯುತ್ತಿದೆ ಎಂದು ಭಾವಿಸಿದರು.

"ಗಾಳಿ ಭರ್ತಿಯಾಗಿದ್ದ ಬಲೂನ್ ಆಗಸದಲ್ಲಿ ಕಾಣಿಸಿಕೊಂಡು, ಕಾಲುವೆಯೊಂದರಲ್ಲಿ ಬಿದ್ದಿದೆ. ಬಲೂನಿನ ಒಂದು ಪಾಶ್ರ್ವ ನಾಲೆಯಲ್ಲಿ ಹರಿಯುತ್ತಿದ್ದ ನೀರಿಗೆ ಸ್ಪರ್ಶವಾಗಿದ್ದು, ಈ ಕಾರಣದಿಂದಾಗಿ ಬಲೂನು ಕಂಪಿಸುತ್ತಿತ್ತು. ಈ ಬಗ್ಗೆ ಅರಿವಿಲ್ಲದ ಪ್ರೇಕ್ಷಕರು, ಆತಂಕ ಹಾಗೂ ಕುತೂಹಲದಿಂದ ಈ ದೃಶ್ಯವನ್ನು ವೀಕ್ಷಿಸುತ್ತಿದ್ದರು ಎಂದು ದಂಕೋರ್ ಪೊಲೀಸ್ ಅಧಿಕಾರಿ ಅನಿಲ್ ಕುಮಾರ್ ಪಾಂಡೆ ವಿವರಿಸಿದ್ದಾರೆ. ಈ ಬಲೂನ್ ಅಸಾಧಾರಣ ಆಕೃತಿಯನ್ನು ಹೊಂದಿದ್ದುದು ಭೀತಿಗೆ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಮಿಕ್ ಧಾರಾವಾಹಿಯ ಸೂಪರ್‍ಹೀರೊ ಪಾತ್ರವಾದ ‘ಐರನ್‍ಮ್ಯಾನ್’ ಆಕೃತಿಯನ್ನು ಈ ಬಲೂನ್ ಹೋಲುತ್ತಿತ್ತು. ಅದೇ ಬಣ್ಣ ಹಾಗೂ ವಿನ್ಯಾಸದಿಂದ ಕೂಡಿತ್ತು. ಆದ್ದರಿಂದ ಅನ್ಯಗ್ರಹದ ಜೀವಿ ಆಕ್ರಮಣ ನಡೆಸುತ್ತಿದೆ ಎಂಬ ಸಂದೇಹ ಮೂಡಿತು ಎಂದು ಪಾಂಡೆ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News