ಗಡಿ ಗ್ರಾಮದಿಂದ ಹಿಂದೆ ಸರಿಯಲು ಮಿಝೋರಾಂಗೆ ತ್ರಿಪುರಾ ತಾಕೀತು

Update: 2020-10-18 11:57 GMT

ಅಗರ್ತಲ: ತ್ರಿಪುರಾ- ಮಿಝೋರಾಂ ಅಂತರ ರಾಜ್ಯ ಗಡಿ ಗ್ರಾಮ ಫುಲ್ದುನ್ಸೆಯಿ ಗ್ರಾಮದಲ್ಲಿ ದೇವಾಲಯ ನಿರ್ಮಾಣದ ಸಂಬಂಧ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮಿರಾಂ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿದ ಬೆನ್ನಲ್ಲೇ, ಈ ನಿಷೇಧಾಜ್ಞೆ ತೆರವುಗೊಳಿಸಬೇಕು ಎಂದು ತ್ರಿಪುರಾ ಸರ್ಕಾರ ಮಿಝೋರಾಂ ಸರ್ಕಾರಕ್ಕೆ ಮನವಿ ಮಾಡಿದೆ. ಈ ವಿವಾದಿತ ಗ್ರಾಮ ತ್ರಿಪುರಾದ ಉತ್ತರ ಜಿಲ್ಲೆಯ ವ್ಯಾಪ್ತಿಗೆ ಸೇರುತ್ತದೆ ಎಂದು ತ್ರಿಪುರಾ ಪ್ರತಿಪಾದಿಸಿದೆ.

ಮಿಝೋರಾಂ ಸರ್ಕಾರದ ಉಪ ಕಾರ್ಯದರ್ಶಿ ಡೇವಿಡ್ ಎಚ್.ಲಾಲ್ತಂಗ್ಲಿಯಾನಾ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ತ್ರಿಪುರಾ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಎ.ಕೆ.ಭಟ್ಟಾಚಾರ್ಯ ಅವರು, ಬೆಲ್ತಿಂಚಿಪ್ ಪ್ರದೇಶ ಪ್ರಸ್ತುತ ತ್ರಿಪುರಾ ಸರ್ಕಾರದ ನಿಯಂತ್ರಣದಲ್ಲಿರುವುದರಿಂದ ಈ ಪ್ರದೇಶದಲ್ಲಿ ನಿಷೇಧಾಜ್ಞೆ ಹೇರಿರುವ ಮಿಝೋರಾಂ ಸರ್ಕಾರದ ಕ್ರಮ ತೀರಾ ಆಕ್ಷೇಪಾರ್ಹ ಎಂದು ಹೇಳಿದ್ದಾರೆ. ತಕ್ಷಣವೇ ನಿಷೇಧಾಜ್ಞೆ ತೆರವುಗೊಳಿಸುವಂತೆ ಅವರು ಮಮಿತ್ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

"ಬೆಲ್ತಿಂಚಿಪ್ ಪ್ರದೇಶ ತ್ರಿಪುರಾ ರಾಜ್ಯದ ಉತ್ತರ ತ್ರಿಪುರಾ ಜಿಲ್ಲೆಯ ಸಂಪೂರ್ಣ ಆಡಳಿತಾತ್ಮಕ ನಿಯಂತ್ರಣದಲ್ಲಿದೆ ಹಾಗೂ ಸ್ವಾಧೀನದಲ್ಲಿದೆ. ಅದನ್ನು ತಪ್ಪಾಗಿ ಜಿಲ್ಲಾಧಿಕಾರಿಗಳು ಮಿಝೋರಾಂಗೆ ಸೇರಿದ್ದೆಂದು ಭಾವಿಸಿ ನಿಷೇಧಾಜ್ಞೆ ಹೇರಿದ್ದಾಗಿ ಪತ್ರದಲ್ಲಿ ಆಕ್ಷೇಪಿಸಲಾಗಿದೆ. ಬೆಲ್ತಿಂಚಿಪ್‍ನಲ್ಲಿ ತ್ರಿಪುರಾ ಸರ್ಕಾರವೇ ವೀಕ್ಷಣಾ ಗೋಪುರ ನಿರ್ಮಿಸಿದ್ದನ್ನು ಕೂಡಾ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಮುನ್ನ ಮಮಿತ್ ಜಿಲ್ಲಾಧಿಕಾರಿ ಲಾಲ್‍ರೋಝಮಾ ನಿಷೇಧಾಜ್ಞೆ ಆದೇಶದಲ್ಲಿ, "ತ್ರಿಪುರಾ ಮೂಲದ ಸೋಂಗ್ರೋಂಗ್ಮಾ ಎಂಬ ಸಘಣಟನೆ ಮಮಿತ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಬೆಲ್ತಿಂಚಿಪ್ (ಥೈದಾವ್ರ್ ಲಾಂಗ್)ನಲ್ಲಿ ಶಿವ ದೇಗುಲ ನಿರ್ಮಿಸಲು ಮುಂದಾಗಿದೆ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News