ಕೊರೋನ ಪರಿಹಾರ ಮೀನುಗಾರರಿಗೂ ಸಿಗಲಿ: ರಾಮ ಖಾರ್ವಿ

Update: 2020-10-18 12:12 GMT

ಬೈಂದೂರು, ಅ.18: ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಉದ್ಯೋಗ ಇಲ್ಲದೆ ಸಂಕಷ್ಟದಲ್ಲಿರುವ ಮೀನುಗಾರ ಕುಟುಂಬಕ್ಕೆ ಮಾಸಿಕ 7500ರೂ.ನಂತೆ 6 ತಿಂಗಳ ಕೊರೋನ ಪರಿಹಾರವನ್ನು ಸರಕಾರ ನೀಡಬೇಕು ಎಂದು ಉಪ್ಪುಂದ ಮೀನುಗಾರರ ಸಂಘದ ಅಧ್ಯಕ್ಷ ರಾಮ ಖಾರ್ವಿ ಆಗ್ರಹಿಸಿದ್ದಾರೆ.

ಅಖಿಲ ಭಾರತ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘಕ್ಕೆ ಸಂಯೋಜಿಸಲ್ಪಟ್ಟ ಉಡಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಆಶ್ರಯದಲ್ಲಿ ಉಪ್ಪುಂದದ ಬೈಂದೂರು ವಲಯ ನಾಡ ದೋಣಿ ಮೀನುಗಾರರ ಸಂಘದ ಕಚೇರಿ ಸಭಾಂಗಣದಲ್ಲಿ ಅ.16ರಂದು ಆಯೋಜಿಸ ಆದ ಬೈಂದೂರು ವಲಯದ ಉಪ್ಪುಂದ ಮೀನುಗಾರರ ಬೃಹತ್ ಸಮಾವೇಶ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮೀನುಗಾರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಕೆ.ಶಂಕರ್ ಮಾತನಾಡಿ, ರೈತರಂತೆ ಮೀನುಗಾರರಿಗೂ ಸರಕಾರದ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕ ಮುಖಂಡರಾದ ಕೋಣಿ ವೆಂಕಟೇಶ್ ನಾಯಕ್, ಗಣೇಶ ಮೊಗವೀರ ಬೈಂದೂರು ಮಾತನಾಡಿ, ಮೀನುಗಾರರು ಜಿಲ್ಲಾ ಮಟ್ಟದಲ್ಲಿ ಸಂಘಟಿತರಾಗಿ ತಮ್ಮ ನ್ಯಾಯಬದ್ಧ ಹಕ್ಕುಗಳಿಗಾಗಿ ಸಮರಶೀಲ ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು. ಮುಂದಿನ ತಿಂಗಳಲ್ಲಿ ಬೈಂದೂರು ತಹಶೀಲ್ದಾರ್ ಕಚೇರಿ ಮುತ್ತಿಗೆ ಹೋರಾಟ ಮಾಡುವ ಕುರಿತು ಸಮಾವೇಶದಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಕಾರ್ಯದರ್ಶಿ ವಿಠಲ್ ಖಾರ್ವಿ, ಮೀನುಗಾರರ ಮುಖಂಡರಾದ ರಾಜಾರಾಮ್ ಖಾರ್ವಿ, ಜಯರಾಮ್ ಖಾರ್ವಿ, ಜ್ಯೋತಿ ಮೊಗವೀರ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News