ಕೊರೋನ ಅವಧಿಯಲ್ಲೂ ಉಚಿತ ಆರೋಗ್ಯ ಸೇವೆ ನೀಡಿದ ಚಿಕಿತ್ಸಾಲಯ !

Update: 2020-10-18 12:17 GMT

ಉಡುಪಿ, ಅ.18: ಕಳೆದ 16 ವರ್ಷಗಳಿಂದ ಉಚಿತ ಆರೋಗ್ಯ ಸೇವೆ ನೀಡುತ್ತಿರುವ ನಗರದ ಆರೂರು ಕಂಪೌಂಡ್‌ನಲ್ಲಿ ಆರೂರು ವೆಂಕಟರಾವ್ ಮತ್ತು ಕಲ್ಯಾಣಿಯಮ್ಮ ಸ್ಮಾರಕ ಟ್ರಸ್ಟ್‌ನಡಿಯಲ್ಲಿ ಕಾರ್ಯಾಚರಿಸುತ್ತಿರುವ ಚಿಕಿತ್ಸಾಲಯವು ಕೊರೋನ ಲಾಕೌಡೌನ್ ಸಮಯದಲ್ಲೂ ನೂರಾರು ಮಂದಿಗೆ ನಿರಂತರ ಸೇವೆಯನ್ನು ಒದಗಿಸಿದೆ.

ಈ ಚಿಕಿತ್ಸಾಲಯದಲ್ಲಿ ಉಡುಪಿ ಜಿಲ್ಲಾ ನಿವೃತ್ತ ಪ್ರಭಾರ ಆರೋಗ್ಯಾಧಿಕಾರಿ ಡಾ.ಕೆ.ಕೆ.ಕಲ್ಕೂರ ಮತ್ತು ಮಣಿಪಾಲ ಕೆಎಂಸಿಯ ಮೆಡಿಸಿನ್ ವಿಭಾಗದ ಮುಖ್ಯಸ್ಥರಾಗಿದ್ದ, ಪ್ರಸ್ತುತ ಮಂಗಳೂರು ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜಿನ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಜಯ ಪ್ರಕಾಶ್ ಸೇವೆ ಸಲ್ಲಿಸುತ್ತಿದ್ದಾರೆ.

2004ಕ್ಕೆ ಆರಂಭಗೊಂಡ ಈ ಚಿಕಿತ್ಸಾಲಯದ ಪ್ರಯೋಜನವನ್ನು ವರ್ಷಕ್ಕೆ ವಲಸೆ ಕಾರ್ಮಿಕರು, ಹಿರಿಯ ನಾಗರಿಕರು, ಪ್ರವಾಸಿಗರು ಸೇರಿದಂತೆ ಸುಮಾರು 8,000 ರೋಗಿಗಳು ಪಡೆಯುತ್ತಿದ್ದಾರೆ. ತಿಂಗಳಿಗೆ ಸುಮಾರು 8,000 ರೂ. ಬೆಲೆಯ ಔಷಧಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಡಾ.ಕೆ.ಕೆ. ಕಲ್ಕೂರ ತಿಳಿಸಿದ್ದಾರೆ.

ಕೊರೋನ ಅವಧಿಯಲ್ಲಿ ಸಾರಿಗೆ ಸಮಸ್ಯೆಯಿಂದ ದೂರದ ಊರುಗಳಿಂದ ಬರುವವರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ರಕ್ತದೊತ್ತಡ, ಮಧುಮೇಹ ಸಮಸ್ಯೆ ಇರುವ ಸ್ಥಳೀಯರಿಗೆ ಹತ್ತು ದಿನದ ಔಷಧಿಗಳನ್ನು ಕೊಡಲಾಗಿದೆ. ಉಸಿರಾಟದ ಸಮಸ್ಯೆಯಂತಹ ಪ್ರಕರಣಗಳಲ್ಲಿ ಜಿಲ್ಲಾಡಳಿತ ಸೂಚಿಸಿದ ಎಲ್ಲ ನಿಯಮಗಳನ್ನು ಪಾಲಿಸಿಯೇ ಔಷಧಿ ನೀಡಲಾಗುತ್ತಿದೆ. ಸರಕಾರದಿಂದ ಕ್ಷಯ ರೋಗಿಗಳಿಗೆ ಬರುವ ಡಾಟ್ಸ್ ಚಿಕಿತ್ಸೆಯನ್ನೂ ಕೂಡ ನೀಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಆರೂರು ಕಲ್ಯಾಣಿಯಮ್ಮನವರ ಇಚ್ಛೆ ಬಡ ಸಾರ್ವಜನಿಕರ ಸೇವೆಯಾಗಿತ್ತು. ಅವರ ಇಚ್ಛೆಯಂತೆ ಟ್ರಸ್ಟ್ ಕಾರ್ಯಾಚರಿಸುತ್ತಿದೆ ಎಂದು ಟ್ರಸ್ಟ್‌ನ ಟ್ರಸ್ಟಿ, ಕೋಶಾಧಿಕಾರಿ ಸುನೀತಾ ರಾವ್ ಮತ್ತು ವ್ಯವಸ್ಥಾಪಕ ರಘುನಂದ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ, ಶನಿವಾರ ಸಂಜೆ ಮತ್ತು ರವಿವಾರ ಹೊರತುಪಡಿಸಿ ಇತರ ಎಲ್ಲ ದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ, ಅಪರಾಹ್ನ 3ರಿಂದ 5 ಗಂಟೆವರೆಗೆ ಸಾಮಾನ್ಯ ಕಾಯಿಲೆಗಳಿಗೆ ಡಾ.ಕಲ್ಕೂರ ಔಷಧಿಗಳನ್ನು ನೀಡಿದರೆ, ಶನಿವಾರ ಅಪರಾಹ್ನ 3ರಿಂದ 4.30ರವರೆಗೆ ಡಾ. ಜಯಪ್ರಕಾಶ್ ಲಭ್ಯ ಇರುತ್ತಾರೆ. ಸರ್ಜರಿ ಹೊರತಾದ ಕಾಯಿಲೆಗಳಿಗೆ ಸಲಹೆ, ಔಷಧಿಗಳನ್ನು ನೀಡುತ್ತಾರೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News