ಶೀತಲೀಕೃತ ಆಹಾರ ಪೊಟ್ಟಣದಲ್ಲಿ ಸಜೀವ ಕೊರೋನ ವೈರಸ್ ಪತ್ತೆ

Update: 2020-10-18 13:06 GMT

ಬೀಜಿಂಗ್: ಆಮದು ಮಾಡಿಕೊಳ್ಳಲಾದ ಸಮುದ್ರ ಮೀನಿನ ಶೀತಲೀಕೃತ ಪ್ಯಾಕೇಟ್‍ನ ಹೊರಬದಿಯಲ್ಲಿ ಸಜೀವ ಕೊರೋನ ವೈರಸ್ ಪತ್ತೆಯಾಗಿರುವುದನ್ನು ಚೀನಾದ ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಬಂದರು ನಗರವಾದ ಕ್ವಿಂಗಾಡೊದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

ಶೀತಲೀಕೃತ ಆಹಾರದ ಪೊಟ್ಟಣದ ಹೊರಗೆ ಪ್ರತ್ಯೇಕವಾಗಿ ಸಜೀವ ಕೊರೋನ ವೈರಸ್ ಪತ್ತೆಯಾಗಿರುವುದು ವಿಶ್ವದಲ್ಲಿ ಇದೇ ಮೊದಲು ಎಂದು ಚೀನಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಟಣೆಯಲ್ಲಿ ಹೇಳಿದೆ.

ಹೊಸದಾಗಿ ಕೋವಿಡ್-19 ಪ್ರಕರಣಗಳು ಬೆಳಕಿಗೆ ಬಂದ ಕ್ವಿಂಗಾಡೊ ಪಟ್ಟಣದಲ್ಲಿ ಅಧಿಕಾರಿಗಳು ಎಲ್ಲ 1.1 ಕೋಟಿ ಮಂದಿಯನ್ನು ಪರೀಕ್ಷೆ ಮಾಡಿದ್ದರು. ಇದೀಗ ಒಂದಷ್ಟು ಗುಂಪು ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಳೆದ ಜುಲೈನಲ್ಲಿ ಆಹಾರ ಪೊಟ್ಟಣದ ಒಳಭಾಗದಲ್ಲಿ ಮಾರಕ ವೈರಸ್ ಪತ್ತೆಯಾದ ಬಳಿಕ ಚೀನಾ ಎಲ್ಲ ಶೀತಲೀಕೃತ ಆಹಾರಗಳ ಆಮದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಜುಲೈನಲ್ಲಿ ಪತ್ತೆಯಾದ ಸೋಂಕಿನ ಮೂಲವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಕೂಲಂಕಷ ತನಿಖೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ನೋವೆಲ್ ಕೊರೋನಾ ವೈರಸ್‍ನಿಂದ ಕಲುಷಿತಗೊಂಡ ಪೊಟ್ಟಣದ ಸಂಪರ್ಕದಿಂದ ಕೂಡಾ ಸೋಂಕು ತಗುಲಬಹುದು ಎನ್ನುವುದು ಇದರಿಂದ ದೃಢಪಟ್ಟಂತಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್‍ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಆದರೆ ಯಾವ ದೇಶದಿಂದ ಆಮದು ಮಾಡಿಕೊಂಡ ಆಹಾರ ಪೊಟ್ಟಣದಲ್ಲಿ ವೈರಸ್ ಪತ್ತೆಯಾಗಿದೆ ಎನ್ನುವುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಅಂತೆಯೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಶೀತಲೀಕೃತ ಆಹಾರ ಪೊಟ್ಟಣಗಳು ವೈರಸ್‍ನಿಂದ ಕಲುಷಿತಗೊಂಡಿರುವ ಸಾಧ್ಯತೆ ವಿರಳ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News