ತಣ್ಣೀರುಬಾವಿ ಬೀಚ್ ಸ್ವಚ್ಛತೆ : ‘ಬೀಚ್ ರಿಜುವೇಶನ್ ಆರ್ಮಿ’ಗೆ ಜನರಿಂದ ಸ್ಪಂದನೆ

Update: 2020-10-18 14:28 GMT

ಮಂಗಳೂರು, ಅ.18: ಕಳೆದ ನಾಲ್ಕು ವಾರದಿಂದ ನಡೆಯುತ್ತಿರುವ ತಣ್ಣೀರುಬಾವಿ ಬೀಚ್ ಸ್ವಚ್ಛತಾ ಕಾರ್ಯಕ್ಕೆ ರವಿವಾರ ಉತ್ತಮ ಸ್ಪಂದನೆ ದೊರತಿದೆ. ‘ಬೀಚ್ ರಿಜುವೇಶನ್ ಆರ್ಮಿ’ ಎಂಬ ಹೆಸರಿನ ಈ ಶುಚಿತ್ವ ಶ್ರಮದಾನಕ್ಕೆ ರವಿವಾರ 200ಕ್ಕೂ ಅಧಿಕ ಮಂದಿ ಪಾಲ್ಗೊಂಡು ಸಮುದ್ರ ಕಿನಾರೆಯ ತ್ಯಾಜ್ಯ ಹೆಕ್ಕುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಗಮನ ಸೆಳೆದರು.

ಯಾವುದೇ ಅಧಿಕೃತ ಆಹ್ವಾನವಿಲ್ಲ. ಸಂಘಟನೆಯ ಕರೆಯೂ ಇಲ್ಲ. ಮಂಗಳೂರಿನ ಮುಹಮ್ಮದ್ ಸಫಕ್ ಎಂಬವರು ಇನ್‌ಸ್ಟ್ರಾಗ್ರಾಮ್‌ನಲ್ಲಿ ಹಾಕಿದ ವೀಡಿಯೋವೊಂದು ಈ ಸ್ವಚ್ಛತಾ ಕಾರ್ಯಕ್ಕೆ ವೇಗ ಪಡೆಯಲು ಕಾರಣವಾಗಿದೆ. ರವಿವಾರ ಮುಂಜಾನೆ 6:30ರಿಂದ 9:30ರವರೆಗೆ ಸ್ವಇಚ್ಛೆಯಿಂದ ಪಾಲ್ಗೊಂಡ ಯುವಜನತೆ ಅದರಲ್ಲೂ ಅಧಿಕ ಸಂಖ್ಯೆಯಲ್ಲಿದ್ದ ಯುವತಿಯರೇ ಒಂದು ಕಿ.ಮೀ. ತನಕದ ಕಸ ಹೆಕ್ಕಿ ರಾಶಿ ಹಾಕಿದರು.

ಕೇರಳದ ಕೊಲ್ಲಂನಿಂದ ಬಂದಿದ್ದ ಮಾಡೆಲ್ ಮತ್ತು ಫಿಟ್ನೆಸ್ ಟ್ರೈನರ್ ದಾಮೋದರ್ ಎಂಬವರು ಸೆ.20ರಂದು ತನ್ನ ಸಂಬಂಧಿಕ ಗಣೇಶ್ ನಾಯಕ್ ಜೊತೆ ತಣ್ಣೀರುಬಾವಿ ಬೀಚ್‌ನಲ್ಲಿ ವಾಕಿಂಗ್ ಮಾಡುತ್ತಿದ್ದ ವೇಳೆ ಗಾಜಿನ ಚೂರೊಂದು ತಾಗಿತ್ತು. ತಕ್ಷಣ ದಾಮೋದರ್ ಆ ಗಾಜಿನ ಚೂರನ್ನು ಹೆಕ್ಕಿದರೂ ಅಲ್ಲಲ್ಲಿ ತ್ಯಾಜ್ಯದ ರಾಶಿಯು ಕಾಣಲು ಸಿಕ್ಕಿತು. ಅದರಲ್ಲೂ ಸಿರಿಂಜ್ ಅಧಿಕ ಸಂಖ್ಯೆಯಲ್ಲಿತ್ತು. ಇದನ್ನು ಕಂಡು ಗಣೇಶ್ ನಾಯಕ್ ಮತ್ತು ದಾಮೋದರ್ ವಾಕಿಂಗ್ ಸ್ಥಗಿತಗೊಳಿಸಿ ತಣ್ಣೀರುಬಾವಿ ಬೀಚ್‌ನ ತ್ಯಾಜ್ಯವನ್ನು ಹೆಕ್ಕಿ ರಾಶಿ ಹಾಕತೊಡಗಿದರು. ಅಲ್ಲದೆ ವೀಡಿಯೋ ಮಾಡಿ ಶೇರ್ ಮಾಡಿದರು. ಇದು ಕೆಲವೇ ದಿನದಲ್ಲಿ ‘ಬೀಚ್ ರಿಜುವೇಶನ್ ಆರ್ಮಿ’ಯ ಹುಟ್ಟಿಗೆ ಕಾರಣವಾಯಿತು.

ನೀವು ಬೀಚ್‌ಗೆ ಬನ್ನಿ. ಹಾಗೇ ವಿಹರಿಸಿ ಹೋಗುವ ಮುನ್ನ ಬೀಚ್‌ನಲ್ಲಿ ರಾಶಿಬಿದ್ದಿರುವ ಗಾಜು, ಸಿರಿಂಜ್‌ಗಳನ್ನೂ ಹೆಕ್ಕಿ ಕಸದ ತೊಟ್ಟಿಗೆ ಹಾಕಿ ಎಂದು ಹೇಳಿದ ಬಳಿಕವಂತೂ ಚಳುವಳಿ ರೂಪತಾಳಿತು. ರಿಜುವೇಶನ್ ಆರ್ಮಿ ಬಗ್ಗೆ ಯೂಟ್ಯೂಬರ್ ಮುಹಮ್ಮದ್ ಶಕ್ ಇಂಡಿಯನ್ ವೀಡಿಯೊ ಮೂಲಕ ನೀಡಿರುವುದು ಹೊಸ ಟ್ರೆಂಡ್ ಸೃಷ್ಟಿಸಿದೆ. ಅಂದರೆ ಇಬ್ಬರಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯವು ನಾಲ್ಕು ವಾರದ ಬಳಿಕ 200 ಮಂದಿಯಿಂದ ನಡೆಯುವಂತಾಗಿದೆ. ರವಿವಾರ ಕೋವಿಡ್ ಮುನ್ನೆಚ್ಚರಿಕೆ ವಹಿಸಿಕೊಂಡು ಬೀಚ್ ಕ್ಲೀನಿಂಗ್ ಮಾಡಲಾಗಿದೆ.

ನಗರದ ತೋಡುಗಳು ಮತ್ತು ನದಿಗಳ ಮೂಲಕ ಮಳೆಗಾಲದಲ್ಲಿ ಸಮುದ್ರಕ್ಕೆ ಕಸ ಹರಿದು ಬಂದು ಸೇರುತ್ತದೆ. ಕೆಲವರು ಬೀಚ್‌ಗೆ ಬಂದು ಪಾರ್ಟಿ ಮಾಡಿ ಪ್ಲಾಸ್ಟಿಕ್, ಕಸ ತಂದು ಅಲ್ಲೇ ಎಸೆದು ಹೋಗುತ್ತಾರೆ. ಸಮುದ್ರದಲ್ಲಿ ಸಂಚರಿಸುವ ಬೋಟ್, ಶಿಪ್‌ಗಳಿಂದ ಎಸೆಯುವ ತ್ಯಾಜ್ಯವೂ ಸೇರಿಸಿ, ಅಲೆಗಳ ಅಬ್ಬರದ ಮೂಲಕ ಬೀಚ್‌ನಲ್ಲಿ ರಾಶಿ ಬೀಳುತ್ತಿದೆ. ಈ ವರ್ಷ ಕೋವಿಡ್‌ನಿಂದ ಕ್ಲೀನಿಂಗ್ ಮಾಡುವವರು ಬಾರದ ಕಾರಣ ಹೆಚ್ಚಿನ ಬೀಚ್‌ಗಳಲ್ಲಿ ಕಸದ ರಾಶಿಯೇ ಬಿದ್ದಿತ್ತು. ಅದಕ್ಕೀಗ ಮುಕ್ತಿಕಾಣಿಸುವ ಪ್ರಯತ್ನ ನಡೆದಿದೆ.

ಇದು ಸ್ವ ಇಚ್ಛೆಯಿಂದ ನಡೆಯುವ ಶ್ರಮದಾನವಾಗಿದೆ. ದೇಹದ ಉಷ್ಣತೆ ತಪಾಸಣೆ ವೇಳೆ ಇಬ್ಬರಿಗೆ ಜ್ವರದ ಲಕ್ಷಣ ಕಂಡು ಬಂದಿದ್ದು, ಅವರನ್ನು ಹಿಂದಕ್ಕೆ ಕಳಹಿಸಲಾಗಿದೆ ಎಂದು ಬೀಚ್ ರಿಜುವೇಶನ್ ಆರ್ಮಿ ಸಂಘಟಕ ಗಣೇಶ್ ಕಾಮತ್ ಮುಲ್ಕಿ ತಿಳಿಸಿದ್ದಾರೆ.

ಮಂಗಳೂರು ಅಂದ ತಕ್ಷಣ ಧರ್ಮ, ಜಾತಿ ಕಾರಣಕ್ಕಾಗಿ ಸಂಘರ್ಷ ನಡೆಯುತ್ತಲೇ ಇದೆ ಎಂಬ ಅಪವಾದ ಇದೆ. ಅದು ಸುಳ್ಳು ಎಂಬುದನ್ನು ಇಲ್ಲೀಗ ಸಾಬೀತುಪಡಿಸಲಾಗಿದೆ. ಎಲ್ಲರೂ ಜಾತಿ, ಧರ್ಮ ಮರೆತು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು ಎಂದು ಮುಹಮ್ಮದ್ ಶಕ್ ತಿಳಿಸಿದ್ದಾರೆ.
ರವಿವಾರದ ಸ್ವಚ್ಛತಾ ಕಾರ್ಯಕ್ಕೆ ನಗರದ ಡ್ಯಾನಿಶ್ ಮಂದಿ ಹೌಸ್, ನೈಟ್ ಸ್ಟ್ರೀಟ್, ಟಿಕ್ಕಾ ಸ್ಟ್ರೀಟ್, ಝುವಿಸ್ ಫಿಟ್ನೆಸ್, ಬ್ಲೂಲೈನ್, ಡ್ರಿಂಕ್ ಲ್ಯಾಬ್ ಕೂಡ ಕೈ ಜೋಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News