ಬ್ಯಾಂಕಿಗೆ ವಂಚನೆ: ದಂಪತಿ ವಿರುದ್ಧ ಪ್ರಕರಣ ದಾಖಲು

Update: 2020-10-18 15:35 GMT

ಶಂಕರನಾರಾಯಣ, ಅ.18: ಎರಡು ಆಡಿಟ್ ವರದಿಗಳನ್ನು ತಯಾರಿಸಿ, ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸದೆ ವಂಚಿಸಿರುವ ದಂಪತಿ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿದ್ಧಾಪುರದ ಗಜಾನನಾ ಕ್ಯಾಶೂ ಇಂಡಸ್ಟ್ರೀಸ್‌ನ ರಾಘವೇಂದ್ರ ಹೆಮ್ಮಣ್ಣ ಹಾಗೂ ಅವರ ಪತ್ನಿ ಆಶಾಕಿರಣ ಎಂಬವರು ಶಂಕರನಾರಾಯಣ ಎಂಬಲ್ಲಿ 2015ರ ಜೂ.13ರಂದು ಹೆಮ್ಸ್ ಫುಡ್ಸ್ ಪ್ರೈ ಲಿಮಿಟೆಡ್ ಕಂಪೆನಿಯನ್ನು ತೆರೆದಿದ್ದು, ಈ ಕಂಪೆನಿಗೆ ಕರ್ಣಾಟಕ ಬ್ಯಾಂಕ್‌ನ ಸಿದ್ದಾಪುರ ಶಾಖೆಯಲ್ಲಿ ಸಾಲ ಪಡೆಯಲು ಅರ್ಜಿ ಹಾಗೂ ಸಂಬಧಿಸಿದ ದಾಖಲೆ ಪತ್ರ ಸಲ್ಲಿಸಿದ್ದರು. ಈ ವೇಳೆ ಕಂಪೆನಿಯ ವಾರ್ಷಿಕ ವ್ಯಾಪಾರ ವಹಿವಾಟು 10,90,60,855ರೂ. ಎಂದು ತೋರಿಸಿ ಆಡಿಟ್ ವರದಿಯನ್ನು ನೀಡಿದ್ದರು.

ಅದನ್ನು ಪರಿಗಣಿಸಿ ಇವರಿಗೆ ಬ್ಯಾಂಕಿನವರು ಒವರ್ ಡ್ರಾಷ್ಟ್ ಸಾಲವಾಗಿ 3,75,00,000ರೂ. ಹಾಗೂ ಮೆಶೀನ್ ಖರೀದಿಗೆ 2,70,00,000 ರೂ. ಮತ್ತು ಹೊಸ ಕಟ್ಟಡ ಕಟ್ಟಲು 25,00,000ರೂ. ಸಾಲವನ್ನು ನೀಡಿದ್ದರು. ಆ ಬಳಿಕ ಆರೋಪಿಗಳು ಸಾಲದ ಕಂತನು ಸರಿಯಾಗಿ ಕಟ್ಟದೆ ಇದ್ದುದರಿಂದ ಬ್ಯಾಂಕಿನವರು ಇವರ ಕಂಪೆನಿಯ ವೆಬ್‌ಸೈಟ್ ಪರೀಶಿಲಿಸಿದರು. ಅದರಲ್ಲಿ ಕಂಪೆನಿಯ ವಾರ್ಷಿಕ ವ್ಯಾಪಾರ ವಹಿವಾಟು 15,08.432.83ರೂ. ಎಂಬುದಾಗಿತ್ತು.

ಇವರು ಬ್ಯಾಂಕಿಗೆ ಮೋಸ ಮಾಡುವ ಉದ್ದೇಶದಿಂದ ಒಂದೆ ಕಂಪೆನಿಯ ಹೆಸರಿನಲ್ಲಿ ಎರಡು ಆಡಿಟ್ ವರದಿಯನ್ನು ತಯಾರು ಮಾಡಿರುವುದು ಕಂಡು ಬಂತು. ಇವರು 2020ರ ಜು.1ಕ್ಕೆ ಒಟ್ಟು 6,74,77,414.31ರೂ. ಸಾಲ ಬಾಕಿ ಇರಿಸಿದ್ದು, ಕಂಪೆನಿಯ ದಾಸ್ತಾನು 5,27,00,000ರೂ. ಎಂದು ತೋರಿಸಿದ್ದಾರೆ. ದಾಸ್ತಾನು ಕೊಠಡಿ ಪರಿಶೀಲಿಸಿದಾಗ ಕಂಪೆನಿಯ ಯಾವುದೇ ಉತ್ಪನಗಳು ದಾಸ್ತಾನು ಇಟ್ಟಿರುವುದಿಲ್ಲ ಎಂದು ಶಾಖಾ ಪ್ರಬಂಧಕ ಶ್ರೀನಿವಾಸ ಶೆಣೈ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News