ನೀಟ್ ಪರೀಕ್ಷೆ: ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ಗೆ ಉತ್ತಮ ಫಲಿತಾಂಶ
ಮಂಗಳೂರು, ಅ.18: ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಈ ಸಲದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯಲ್ಲಿ ತನ್ನದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದೆ.
2019ರ ನೀಟ್ ಪರೀಕ್ಷೆಯಲ್ಲಿ ಸಂಸ್ಥೆಯ ವಿದ್ಯಾರ್ಥಿ 663 ಅಂಕ ಗಳಿಸಿರುವುದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಮುಹಮ್ಮದ್ ಅಬ್ರಾರ್ 665 ಅಂಕಗಳನ್ನು ಗಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಬ್ರಾರ್‌ರನ್ನು ಬೆಂಗಳೂರಿನ ಶಾಹೀನ್ಸ್ ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಆಡಳಿತ ನಿರ್ದೇಶಕ ಅಬ್ದುಲ್ ಸುಭಾ್ ಅಭಿನಂದಿಸಿದ್ದಾರೆ.
ರಾಜಸ್ತಾನ ಮೂಲದ ಅಬ್ರಾರ್ ಆರ್ಥಿಕವಾಗಿ ಬಡ ಕುಟುಂಬದ ವಿದ್ಯಾರ್ಥಿಯಾಗಿದ್ದು, ಅವರ ತಂದೆ ಮುಹಮ್ಮದ್ ಇಸ್ಲಾಮ್ ರಿಕ್ಷಾ ಚಾಲಕರಾಗಿದ್ದಾರೆ. ಮನೆಯಲ್ಲಿ ವಿದ್ಯುತ್ ಬೆಳಕಿನ ವ್ಯವಸ್ಥೆಯಿಲ್ಲದ ಹಿನ್ನೆಲೆಯಲ್ಲಿ ಅಬ್ರಾರ್, ರಾತ್ರಿ 7ರಿಂದ ಮರುದಿನ ಮುಂಜಾವ 2 ಗಂಟೆಯವರೆಗೆ ಬೀದಿಯ ಬೆಳಕಿನಲ್ಲಿ ಅಧ್ಯಯನ ಮಾಡಿದ್ದರು. ಆದರೆ ಉನ್ನತ ಶಿಕ್ಷಣ ಪಡೆಯಬೇಕೆಂಬ ಛಲ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸುತ್ತಿದ್ದ ಅಬ್ರಾರ್‌ರನ್ನು ಗಮನಿಸಿದ ಸ್ಥಳೀಯ ಎನ್‌ಜಿಒವೊಂದು ಅವರ ಬಗ್ಗೆ ನಮಗೆ ಶಿಫಾರಸು ಮಾಡಿತ್ತು. ರೈಲು ಟಿಕೆಟ್ ಹಣ ಹೊಂದಿಸಲು, ಪ್ರವೇಶ ಪತ್ರಕ್ಕೆ 100 ರೂ. ಹೊಂದಿಸಲೂ ಅಸಾಧ್ಯವಾಗಿದ್ದ ಅಬ್ರಾರ್‌ರನ್ನು ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆಯೊಂದಿಗೆ ದತ್ತು ಸ್ವೀಕರಿಸಿತು. ಒಂದು ಜೊತೆ ಬಟ್ಟೆ, ಮೂಟೆ ತುಂಬಾ ಕನಸುಗಳೊಂದಿಗೆ ಬೆಂಗಳೂರಿಗೆ ಬಂದಿದ್ದ ಅಬ್ರಾರ್, ಈಗ ನೀಟ್ ಪರೀಕ್ಷೆಯಲ್ಲಿ ಹೆಮ್ಮೆಯ ಟಾಪರ್ ಆಗಿದ್ದಾರೆ ಎಂದು ಬೆಂಗಳೂರಿನ ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಎಂ.ಡಿ. ಅಬ್ದುಲ್ ಸುಭಾನ್ ತಿಳಿಸಿದ್ದಾರೆ.
‘‘ನನ್ನ ಈ ಸಾಧನೆಗೆ ಕಠಿಣ ಪರಿಶ್ರಮ ಹಾಗೂ ವಿಶೇಷವಾಗಿ ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಆಡಳಿತ ನಿರ್ದೇಶಕ ಅಬ್ದುಲ್ ಸುಭಾನ್‌ರ ಸೂಕ್ತ ಮಾರ್ಗದರ್ಶನ ಮತ್ತು ಪ್ರೇರಣೆ ಕಾರಣ’’ ಎಂದು ಅಬ್ರಾರ್ ಪ್ರತಿಕ್ರಿಯಿಸಿದ್ದಾರೆ.
ಇದೇರೀತಿ, ಶಿರಸಿಯ ತಬಸ್ಸುಮ್ ಶೇಖ್ ಅವರೂ ಫಾಲ್ಕನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ ನೆರವಿನಿಂದ ನೀಟ್‌ನಲ್ಲಿ ಉತ್ತಮ ಅಂಕ ಗಳಿಸಿದ್ದಾರೆ. ನಾಲ್ವರು ಸಹೋದರಿಯರಿರುವ ಈ ಕುಟುಂಬದಲ್ಲಿ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಒಮ್ಮೆ ಶಿರಸಿಗೆ ಭೇಟಿ ನೀಡಿದ್ದ ನಾನು , ತಬಸ್ಸುಮ್ ಶೇಖ್ ಅವರ ತಾಯಿಯನ್ನು ಒಪ್ಪಿಸಿ, ತಬಸ್ಸುಮ್‌ಗೆ ಪುಸ್ತಕ, ಕೋಚಿಂಗ್, ಆಹಾರ ಮತ್ತು ವಾಸ್ತವ್ಯದ ವ್ಯವಸ್ಥೆ ಕಲ್ಪಿಸಿ ನೀಟ್ ಪರೀಕ್ಷೆಗೆ ತರಬೇತಿ ನೀಡಿದೆವು. ಇದೀಗ ಆಕೆ 600 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಸಂಸ್ಥೆಯ ಶೇ.51ಕ್ಕೂ ಅಧಿಕ ವಿದ್ಯಾರ್ಥಿಗಳು ‘ನೀಟ್’ ತೇರ್ಗಡೆಯಾಗಿದ್ದು, ಇವರಲ್ಲಿ 10 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದು 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಗಳೂರಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲೇ ಉಚಿತ ಸರಕಾರಿ ಸೀಟು ಪಡೆಯುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಮಂಗಳೂರಿನ ಫಾಲ್ಕನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ವರ್ಷದಲ್ಲೇ ‘ನೀಟ್’ನಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಮೂಡುಬಿದಿರೆಯ ಬೀಬಿ ಮರಿಯಮ್ ಶಮಾಮ್ ಎಂಬ ವಿದ್ಯಾರ್ಥಿನಿ 588 ಅಂಕ ಗಳಿಸಿದ್ದು, ಉಚಿತ ಎಂಬಿಬಿಎಸ್ (ಸರಕಾರಿ ಖೋಟಾದಡಿ) ಸೀಟು ಪಡೆಯಲಿದ್ದಾರೆ. ಫಾತಿಮಾ ಹಿಬಾ 502 ಅಂಕ ಸೇರಿದಂತೆ ಮಂಗಳೂರು ಸಂಸ್ಥೆಯ ಫಾತಿಮಾ ಝುಹಿನಾ , ಆಫಿಯಾ ಎಸ್.ಎಂ., ಶ್ರೀನಿಧಿ ನಾಯಕ್ ಯು., ಎಂ.ಎಂ.ಝುಲೈಕಾ ಶೆಝಿಲ್, ಅಲ್ಫಿಯಾ ಮತ್ತಿತರರು ಉತ್ತಮ ಅಂಕ ಗಳಿಸಿದ್ದಾರೆ.
ಪ್ರಸಕ್ತ ಸಾಲಿನ ನೀಟ್‌ನಲ್ಲಿ 450ಕ್ಕಿಂತ ಅಧಿಕ ಅಂಕಗಳನ್ನು ಗಳಿಸಿ ಮುಂದಿನ ವರ್ಷ ಮತ್ತೆ ನೀಟ್ ಪರೀಕ್ಷೆ ಬರೆಯಲು ಇಚ್ಛಿಸುವ ಆಸಕ್ತ 100 ವಿದ್ಯಾರ್ಥಿಗಳಿಗೆ ಒಂದು ವರ್ಷದ ನೀಟ್ ದೀರ್ಘಾವಧಿಯ ಬ್ಯಾಚ್‌ಗೆ ಉಚಿತ ಸೀಟುಗಳನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.