ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ

Update: 2020-10-18 16:45 GMT

ಹೊಸದಿಲ್ಲಿ, ಅ. 18: ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಚೆನ್ನೈಯಲ್ಲಿರುವ ದೇಶೀಯವಾಗಿ ನಿರ್ಮಿಸಲಾದ ಹೊಂಚುದಾಳಿ ಯುದ್ಧ ನೌಕೆ ಐಎನ್‌ಎಸ್‌ನಿಂದ ರವಿವಾರ ಯಶಸ್ವಿ ಪರೀಕ್ಷೆ ನಡೆಸಲಾಯಿತು.

ಕ್ಷಿಪಣಿ ಪರೀಕ್ಷೆಯನ್ನು ಅರೇಬಿ ಸಮುದ್ರದಲ್ಲಿ ನಡೆಸಲಾಯಿತು. ಕ್ಷಿಪಣಿ ಪಿನ್ ಪಾಯಿಂಟ್ ನಿಖರತೆಯೊಂದಿಗೆ ನಿಗದಿಪಡಿಸಲಾದ ಗುರಿಯನ್ನು ಯಶಸ್ವಿಯಾಗಿ ಹೊಡೆದಿದೆ ಎಂದು ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಈ ಕ್ಷಿಪಣಿ 290 ಕಿ.ಮೀ. ದೂರ ವ್ಯಾಪ್ತಿ ಹೊಂದಿದ್ದು, 2.8 ಮ್ಯಾಕ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟ ಹೆಚ್ಚು. ಪ್ರಧಾನ ದಾಳಿ ಕ್ಷಿಪಣಿಯಾಗಿರುವ ಬ್ರಹ್ಮೋಸ್ ದೂರ ವ್ಯಾಪ್ತಿಯಲ್ಲಿ ನೌಕಾ ಮೇಲ್ಮೈ ಗುರಿಯನ್ನು ಹೊಡೆದುರುಳಿಸುವ ಮೂಲಕ ಯುದ್ಧ ನೌಕೆಗೆ ಜಯ ತಂದುಕೊಡಲಿದೆ. ಆದುದರಿಂದ ಈ ಕ್ಷಿಪಣಿ ನೌಕಾ ಪಡೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಳ್ಳಲಿದೆ.

ಬಹುಮುಖಿ ಸಾಮರ್ಥ್ಯದ ಈ ಕ್ಷಿಪಣಿಯನ್ನು ಭಾರತ ಹಾಗೂ ರಶ್ಯ ಜಂಟಿಯಾಗಿ ವಿನ್ಯಾಸಗೊಳಿಸಿದೆ ಹಾಗೂ ನಿರ್ಮಿಸಿದೆ. ಈ ಕ್ಷಿಪಣಿಯನ್ನು ಸಬ್‌ಮೆರಿನ್, ಹಡಗು, ವಿಮಾನ ಅಥವಾ ನೆಲದ ಯಾವುದೇ ವೇದಿಕೆಯಿಂದ ಉಡಾಯಿಸಬಹುದು ಎಂದು ಅದು ತಿಳಿಸಿದೆ.

 ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ ನಡೆಸಿದ ಬ್ರಹ್ಮೋಸ್ ಏರೋಸ್ಪೇಸ್, ಭಾರತೀಯ ನೌಕಾಪಡೆ ಹಾಗೂ ಡಿಆರ್‌ಡಿಒವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News