ಪಂಚಾಯತ್ ರಾಜ್: ಭಾರತ ಸರಕಾರದ ಸಂವಾದಕ್ಕೆ ರಾಜ್ಯದಿಂದ ಬೆಳಪು ದೇವಿಪ್ರಸಾದ್ ಶೆಟ್ಟಿ

Update: 2020-10-19 14:48 GMT

ಪಡುಬಿದ್ರಿ: ಭಾರತ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಕೈಗೊಂಡಿರುವ ಯೋಜನೆಗಳು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಭಾರತ ಸರಕಾರ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ವಿಶೇಷ ಸಾಧನೆ ಮಾಡಿರುವ ದೇಶದ ಆಯ್ದ 4 ಪಂಚಾಯತ್ ಅಧ್ಯಕ್ಷರುಗಳನ್ನು ಆಯ್ಕೆಗೊಳಿಸಿದ್ದು ಕರ್ನಾಟಕ ರಾಜ್ಯದಿಂದ ಏಕೈಕ ಪ್ರತಿನಿಧಿಯಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿಯವರಿಗೆ ಅವಕಾಶ ಕಲ್ಪಿಸಿದೆ.

ಸರಕಾರ ಪಠ್ಯಪುಸ್ತಕದಲ್ಲಿ ಬೆಳಪು ಗ್ರಾಮದ ಅಭಿವೃದ್ಧಿಯ ಅಧ್ಯಾಯ ಪ್ರಕಟಿಸಿದ್ದು ಆದಾಯದಲ್ಲಿ ಅತ್ಯಂತ ಹಿಂದುಳಿದಿದ್ದ ಪುಟ್ಟ ಕಂದಾಯ ಗ್ರಾಮವನ್ನು ನಗರಕ್ಕೆ ಹೋಲುವ ರೀತಿಯಲ್ಲಿ ಅಭಿವೃದ್ಧಿಗೊಳಿಸಿ, ನಿವೇಶನ ರಹಿತ ನೂರಾರು ಬಡವರಿಗೆ ನಿವೇಶನ, ಗ್ರಾಮಸ್ಥರಿಗೆ ಶುದ್ಧೀಕರಣದ ಕುಡಿಯುವ ನೀರಿನ ಯೋಜನೆ, ದೇಶಭಕ್ತಿ ಮತ್ತು ನಾಡ ಭಕ್ತಿ ಹೆಚ್ಚಿಸುವ ವಿಶಿಷ್ಟ ಯೋಜನೆ, ಕೆ.ಜಿ ಯಿಂದ ಪಿ.ಜಿ.ಯವರೆಗಿನ ಶೈಕ್ಷಣಿಕ ಕೇಂದ್ರ, ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರ, ಕೈಗಾರಿಕಾ ಪಾರ್ಕ್, ಪ್ರವಾಸೋದ್ಯಮ ಉತ್ತೇಜನ, ಸ್ಥಳೀಯ ಸಂಪನ್ಮೂಲ ಅಭಿವೃದ್ಧಿ ಯೋಜನೆ, ಕಸದಿಂದ ರಸ ಯೋಜನೆ, ಅತ್ಯಾಧುನಿಕ ಆಡಳಿತ ವ್ಯವಸ್ಥೆ, ಸುಂದರ ಗ್ರಾಮ ಸೌಧ ಯೋಜನೆಗೆ ಚಾಲನೆ ನೀಡಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮೀಣಾಭಿವೃದ್ಧಿ ಪ್ರತಿನಿಧಿಗಳು, ಅಧಿಕಾರಿಗಳು, ಶಾಲಾ ಮಕ್ಕಳು ಗ್ರಾಮ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಹಲವಾರು ಜಿಲ್ಲಾ-ರಾಜ್ಯ-ರಾಷ್ಟ್ರ-ಅಂತರಾಷ್ಟ್ರೀಯ ಪುರಸ್ಕಾರ ಲಭಿಸಿದೆ.

ದೇವಿಪ್ರಸಾದ್ ಶೆಟ್ಟಿಯವರ ಸಾಧನೆಗಳನ್ನು ಗುರುತಿಸಿ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇದರ ನಿರ್ದೇಶಕರಾದ  ಡಾ. ಗಣೇಶ್ ಪ್ರಸಾದ್‍ರವರು ಭಾರತ ಸರಕಾರಕ್ಕೆ ಶೆಟ್ಟಿಯವರ ಹೆಸರನ್ನು ಕರ್ನಾಟಕದಿಂದ ಶಿಫಾರಸುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News