ಕೋವಿಡ್ ಸೋಂಕು ಹರಡದಂತೆ ಎಚ್ಚರ ವಹಿಸಿ: ಮಹೇಶ್ವರ ರಾವ್

Update: 2020-10-19 15:26 GMT

ಉಡುಪಿ, ಅ.19: ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು-ಹೆಚ್ಚು ಮಾಡುವುದರೊಂದಿಗೆ ಸೋಂಕಿತರನ್ನು ಪ್ರತ್ಯೇಕಿಸಿ ಸೋಂಕು ಹರಡದಂತೆ ಎಚ್ಚರ ವಹಿಸಬೇಕು ಎಂದು ಕಂದಾಯ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ.ಮಹೇಶ್ವರ ರಾವ್ ಹೇಳಿದ್ದಾರೆ.

ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ಕೋವಿಡ್-19ರ ಪ್ರಸ್ತುತ ಸ್ಥಿತಿ, ಪ್ರಕೃತಿ ವಿಕೋಪ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕಳೆದ ಮಾರ್ಚ್‌ನಿಂದ ಜಿಲ್ಲಾಡಳಿತ ಸೇರಿದಂತೆ ಆರೋಗ್ಯ ಇಲಾಖೆ ಉತ್ತಮವಾಗಿ ಕಾರ್ಯನಿರ್ವಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಜಿಲ್ಲೆಯನ್ನು ಕೋವಿಡ್ ಸೋಂಕು ಮುಕ್ತಗೊಳಿಸಲು ಮುಂದಾಗಬೇಕೆಂದು ತಿಳಿಸಿದರು.

ಈವರೆಗೆ 1.57 ಲಕ್ಷಕ್ಕೂ ಹೆಚ್ಚು ಜನರ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, 20,830 ಕೋವಿಡ್ ಪಾಸಿಟಿವ್ ಪ್ರಕರಣಗಳಾಗಿವೆ. ಶೇ.90.80ರಷ್ಟು ಮಂದಿ ಗುಣಮುಖರಾಗಿದ್ದಾರೆ. ಇವುಗಳಲ್ಲಿ ಶೇ.13ರಷ್ಟು ಮಂದಿಯಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದರೆ, ಉಳಿದ ಶೇ.87ರಷ್ಟು ಮಂದಿಯಲ್ಲಿ ಯಾವುದೇ ರೋಗಲಕ್ಷಣಗಳು ಕಂಡು ಬಂದಿಲ್ಲ ಎಂದವರು ಹೇಳಿದರು.

ಆರೋಗ್ಯ ಇಲಾಖೆ ಸ್ಥಳೀಯ ಮೆಡಿಕಲ್ ಕಾಲೇಜಿನ ಸಹಯೋಗದೊಂದಿಗೆ ಸೀರೋ ಸರ್ವೇಲೆನ್ಸ್ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು ಎಂದ ಅವರು ಕೋವಿಡ್‌ನಿಂದ ಮರಣ ಹೊಂದಿರುವವರು ಕೋವಿಡ್ ತೀವ್ರತೆ ಅಥವಾ ಇನ್ನಿತರ ಖಾಯಿಲೆಯಿಂದ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಆಳವಾಗಿ ಪರೀಕ್ಷಿಸಿ ವರದಿ ಇಟ್ಟುಕೊಳ್ಳಬೇಕು ಎಂದರು.

ಕೋವಿಡ್ ಚಿಕಿತ್ಸೆಗೆ ಅಗತ್ಯರುವ ಔಷಧಿ ದಾಸ್ತಾನು ಹಾಗೂ ಸುರಕ್ಷತಾ ಪರಿಕರಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಅವರು, ಮುಂದಿನ ದಿನಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಹಾಗೂ ಪರಿಕರಗಳನ್ನು ಸರಕಾರದಿಂದ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಈ ಬಾರಿ ಸುರಿದ ವ್ಯಾಪಕ ಮಳೆಯಿಂದಾಗಿ ಆದ ಹಾನಿಗಳಲ್ಲಿ 2068 ಪ್ರಕರಣಗಳಿಗೆ ಒಟ್ಟು 2.72 ಕೋಟಿ ರೂ. ಪರಿಹಾರವನ್ನು ನೀಡಲಾಗಿದೆ. ಉಳಿದ ಪ್ರಕರಣಗಳಲ್ಲಿ ಶೀಘ್ರವಾಗಿ ಪರಿಹಾರವನ್ನು ನೀಡಬೇಕೆಂದು ಅಧಿಕಾರಿ ಗಳಿಗೆ ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸರಕಾರದ ಅಭಿವೃಧ್ದಿ ಕಾರ್ಯಗಳು ಸೇರಿದಂತೆ ಖಾಸಗಿ ಕಟ್ಟಡಗಳ ನಿರ್ಮಾಣಕ್ಕೆ ಮರಳಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು.ಮಳೆ ಪ್ರಮಾಣ ಕಡಿಮೆ ಆಗಿರುವ ಹಿನ್ನಲೆ ಮರಳಿನ ಬ್ಲಾಕ್‌ಗಳನ್ನು ಗುರುತಿಸುವುದರೊಂದಿಗೆ ನಿಯಮಾನುಸಾರ ಮರಳು ತೆಗೆಯಲು ಅನುಮತಿ ನೀಡಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಎಸ್ಪಿ ಕುಮಾರ ಚಂದ್ರ, ಉಪ ವಿಭಾಗಾಧಿಕಾರಿ ರಾಜು ಹಾಗೂ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News