×
Ad

ಉಡುಪಿ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಮಾಣ ಇಳಿಮುಖ: ಡಾ.ಸೂಡ

Update: 2020-10-19 21:17 IST

ಉಡುಪಿ, ಅ.19: ಅಕ್ಟೋಬರ್ ತಿಂಗಳಿನಿಂದ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಪ್ರಮಾಣ ಇಳಿಮುಖಗೊಂಡಿದ್ದು, ಇದು ಕೊರೋನ ನಿಯಂತ್ರಣದಲ್ಲಿ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಪರೀಕ್ಷೆ ನಡೆಸಿದ ಒಟ್ಟು ಸ್ಯಾಂಪಲ್‌ಗಳಲ್ಲಿ ಶೇ.25ರಿಂದ 30ರಷ್ಟಿದ್ದ ಪಾಸಿಟಿವ್ ಪ್ರಮಾಣ ಸೆಪ್ಟಂಬರ್ ತಿಂಗಳ ಬಳಿಕ ನಿಧಾನವಾಗಿ ಇಳಿಯತೊಡಗಿದ್ದು, ಅಕ್ಟೋಬರ್ ಬಳಿಕ ಇದು ಶೇ.10ಕ್ಕೂ ಕೆಳಕ್ಕಿಳಿದಿದೆ. ವಾರದ ಕೆಲವು ದಿನಗಳಲ್ಲಿ ಇಂದು ಶೇ.5ರಿಂದ 6ರ ನಡುವೆ ಇದ್ದು, ಉಳಿದಂತೆ 8ರಿಂದ 10ರ ಆಸುಪಾಸಿನಲ್ಲಿದೆ. ಇಂದು ಪಾಸಿಟಿವ್ ಪ್ರಮಾಣ ಶೇ.7.65 ಆಗಿದ್ದರೆ, ನಿನ್ನೆ ಇದು ಶೇ.5.85 ಆಗಿತ್ತು ಎಂದವರು ಹೇಳಿದರು.

ಇನ್ನೂ ಒಂದು ಆಶಾದಾಯಕ ಬೆಳವಣಿಗೆ ಎಂದರೆ, ಈಗ ಶೇ.85ರಿಂದ 90 ರಷ್ಟು ಆರ್‌ಟಿ-ಪಿಸಿಆರ್ ಪರೀಕ್ಷೆಗಳೇ ನಡೆಯುತಿದ್ದು, 10ರಿಂದ 15ರಷ್ಟು ಮಾತ್ರ ಆರ್‌ಎಟಿ ಪರೀಕ್ಷೆ ನಡೆಯುತ್ತಿದೆ. ಇದರಿಂದ ಪರೀಕ್ಷೆ ಹೆಚ್ಚು ವಿಶ್ವಾಸಾರ್ಹವೆನಿಸಿಕೊಂಡಿದೆ. ಇದರ ಆಧಾರದಲ್ಲಿ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ನಾವು ವಿಶ್ವಾಸದಿಂದ ಹೇಳಬಹುದಾಗಿದೆ ಎಂದು ಡಾ. ಸೂಡ ತಿಳಿಸಿದರು.

ಈಗ ಜಿಲ್ಲಾ ಆಸ್ಪತ್ರೆಯಲ್ಲಿ 2000 ಸ್ಯಾಂಪಲ್‌ಗಳನ್ನು ಪರೀಕ್ಷೆಗೊಳಪಡಿಸಿದರೆ 100ರಷ್ಟು ಮಾತ್ರ ಪಾಸಿಟಿವ್ ಬರುತಿದ್ದು, ಇಂದು ನಡೆದ 948 ಸ್ಯಾಂಪಲ್‌ಗಳ ಪರೀಕ್ಷೆಯಲ್ಲಿ ಕೇವಲ 58 ಮಾತ್ರ ಪಾಸಿಟಿವ್ ಬಂದಿವೆ ಎಂದವರು ಹೇಳಿದರು.

ಆದರೆ ಇನ್ನು ಮುಂದೆ ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳಿರುವುದರಿಂದ ನಾವು ಹೆಚ್ಚು ಜಾಗೃತರಾಗಿರಬೇಕಾಗುತ್ತದೆ. ಸಾರ್ವಜನಿಕರು ಒಟ್ಟು ಸೇರುವ ದೇವಸ್ಥಾನಗಳು ಹಾಗೂ ಇತರ ಸ್ಥಳಗಳಿಂದ ಜನರು ಅದರಲ್ಲೂ ಹಿರಿಯರು ದೂರು ಇರುವುದು ತುಂಬಾ ಮುಖ್ಯ. ಜನರು ಕೊರೋನ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿದರೆ ಇದೇ ಪರಿಸ್ಥಿತಿ ಮುಂದುವರಿಯಬಹುದು. ಜನರು ಎಚ್ಚರ ತಪ್ಪಿದರೆ ಮತ್ತೆ ಈ ಪ್ರಮಾಣ ಹೆಚ್ಚಳವಾಗಬಹುದು ಎಂದು ಅವರು ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News