4 ಮಕ್ಕಳ ಹತ್ಯೆ ಪ್ರಕರಣ: ಅತ್ಯಾಚಾರ ಎಸಗಿ ಹತ್ಯೆಗೈದಿರುವ ಶಂಕೆ

Update: 2020-10-19 17:07 GMT

ಮುಂಬೈ, ಅ.19: ಉತ್ತರ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಅಕ್ಟೋಬರ್ 15ರಂದು ಬೆಳಕಿಗೆ ಬಂದಿದ್ದ 4 ಮಕ್ಕಳ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು , ಸಾಂದರ್ಭಿಕ ಮತ್ತು ವಿಧಿವಿಜ್ಞಾನ ಪುರಾವೆಯನ್ನು ಗಮನಿಸಿದರೆ ಹತ್ಯೆಗೆ ಮುನ್ನ ಅತ್ಯಾಚಾರ ಎಸಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ನಡೆದು 4 ದಿನ ಕಳೆದರೂ ತನಿಖೆಯಲ್ಲಿ ಪ್ರಗತಿಯಾಗಿಲ್ಲ. ಆದರೆ ಸಾಂದರ್ಭಿಕ ಮತ್ತು ವಿಧಿವಿಜ್ಞಾನ ಸಾಕ್ಷಿಗಳ ಆಧಾರದಲ್ಲಿ ಕೊಲೆ ಪ್ರಕರಣದ ಜೊತೆಗೆ ಅತ್ಯಾಚಾರ ಆರೋಪವನ್ನೂ ಸೇರಿಸಲಾಗಿದೆ ಎಂದು ಐಜಿಪಿ ಪ್ರತಾಪ್ ದಿಘಾವ್ಕರ್ ಹೇಳಿದ್ದಾರೆ.

ಜಲಗಾಂವ್ ಜಿಲ್ಲಾ ವ್ಯಾಪ್ತಿಯ ರವೇರ್ ತಾಲೂಕ ಗ್ರಾಮದಲ್ಲಿ ಅಕ್ಟೋಬರ್ 15ರ ರಾತ್ರಿ ಹೊಲದ ಮನೆಯಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ 13 ಮತ್ತು 6 ವರ್ಷದ ಬಾಲಕಿಯರು ಹಾಗೂ 12 ಮತ್ತು 8 ವರ್ಷದ ಬಾಲಕರನ್ನು ಗುರುತಿಸಲಾಗದ ದುಷ್ಕರ್ಮಿ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದ. ಮನೆಯ ಮಾಲಕ ಮರುದಿನ ಬೆಳಗ್ಗೆ ಅಲ್ಲಿಗೆ ಬಂದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ತೆರಳಬೇಕಿದ್ದರಿಂದ ಮಕ್ಕಳ ಹೆತ್ತವರು ತಾವು ಕೆಲಸ ಮಾಡುತ್ತಿದ್ದ ವ್ಯಕ್ತಿಯ ಹೊಲದ ಮನೆಯಲ್ಲಿ ಮಕ್ಕಳನ್ನು ಬಿಟ್ಟು ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಪೋಕ್ಸೊ ಕಾಯ್ದೆಯ ಸೆಕ್ಷನ್‌ಗಳಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಗೃಹ ಸಚಿವ ಅನಿಲ್ ದೇಶ್‌ಮುಖ್, ತನಿಖೆ ಸರಿಯಾದ ದಿಕ್ಕಿನಲ್ಲಿ ಮುಂದುವರಿದಿದ್ದು ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News