ಮಲಬಾರ್ ನೌಕಾಪಡೆ ಸಮರಾಭ್ಯಾಸಕ್ಕೆ ಆಸ್ಟ್ರೇಲಿಯ ಸೇರ್ಪಡೆ: ಭಾರತ ಘೋಷಣೆ; ಚೀನಾಕ್ಕೆ ಮುಖಭಂಗ

Update: 2020-10-19 17:51 GMT

ಹೊಸದಿಲ್ಲಿ,ಅ.19: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ಮಲಬಾರ್ ನೌಕಾಪಡೆ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯ ಕೂಡಾ ಪಾಲ್ಗೊಳ್ಳಲಿದೆ ಎಂದು ಭಾರತ ಘೋಷಿಸಿದೆ. ಇದರೊಂದಿಗೆ ಈ ಬೃಹತ್ ನೌಕಾಪಡೆ ಸಮರಾಭ್ಯಾಸದಲ್ಲಿ ಭಾರತ,ಅಮೆರಿಕ,ಜಪಾನ್, ಆಸ್ಟ್ರೇಲಿಯ ಒಳಗೊಂಡ ಚತುರ್‌ರಾಷ್ಟ್ರ ಮೈತ್ರಿಕೂಟದ ಎಲ್ಲಾ ನಾಲ್ಕು ದೇಶಗಳು ಪಾಲ್ಗೊಳ್ಳುವಂತಾಗಿದೆ. ಈ ಜಂಟಿ ಸೇನಾ ಕವಾಯತಿನಲ್ಲಿ ಆಸ್ಟ್ರೇಲಿಯ ಪಾಲ್ಗೊಳ್ಳುವುದಕ್ಕೆ 2007ರಲ್ಲಿ ಚೀನಾ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯ ಹಿಂದೆ ಸರಿದಿತ್ತು. ಆದರೆ ಇದೀಗ ಆಸ್ಟ್ರೇಲಿಯವನ್ನು ಜಂಟಿ ಸೇನಾ ಕವಾಯಿತಿಗೆ ಸೇರ್ಪಡೆಗೊಳಿಸುವ ಭಾರತದ ನಿರ್ಧಾರದಿಂದ ಚೀನಾಕ್ಕೆ ಮುಖಭಂಗವಾದಂತಾಗಿದೆ.

   ಅಮೆರಿಕ ಹಾಗೂ ಜಪಾನ್, ಭಾರತದ ಜೊತೆ ಈ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲಿರುವ ಇತರ ದೇಶಗಳಾಗಿವೆ. ಪೂರ್ವ ಲಡಾಖ್ ಗಡಿಯಲ್ಲಿ ತನ್ನ ಸೈನಿಕರನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಿ ತಂಟೆ ನಡೆಸುತ್ತಿರುವ ಚೀನಾಕ್ಕೆ, ಮಲಬಾರ್ ನೌಕಾ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯ ಸೇರ್ಪಡೆಯಿಂದ ಮರ್ಮಾಘಾತವಾಗಿದೆ.

ಈ ಬಗ್ಗೆ ರಕ್ಷಣಾ ಸಚಿವಾಲಯ ಮಂಗಳವಾರ ಹೇಳಿಕೆಯೊಂದನ್ನು ನೀಡಿದ್ದು, ‘‘ಸಾಗರಪ್ರದೇಶದ ಭದ್ರತೆಗೆ ಸಂಬಂಧಿಸಿ ಇತರ ದೇಶಗಳ ಜೊತೆ ಸಹಕಾರವನ್ನು ಹೆಚ್ಚಿಸಲು ಭಾರತವು ಬಯಸಿದೆ. ಆಸ್ಟ್ರೇಲಿಯದ ಜೊತೆ ಭಾರತದ ರಕ್ಷಣಾ ಸಹಕಾರವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 2020ರ ಮಲಬಾರ್ ನೌಕಾಪಡೆಯ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯದ ನೌಕಾಪಡೆ ಕೂಡಾ ಪಾಲ್ಗೊಳ್ಳಲಿದೆ ’’ಎಂದು ಹೇಳಿದೆ.

  1992ರಲ್ಲಿ ಮಲಬಾರ್‌ ನೌಕಾಪಡೆ ಸಮರಾಭ್ಯಾಸ ಮೊದಲಿಗೆ ಆರಂಭಗೊಂಡಿತ್ತು. ಆಗ ಅಮೆರಿಕ ಹಾಗೂ ಭಾರತ ಮಾತ್ರವೇ ಪಾಲ್ಗೊಂಡಿದ್ದವು. 2015ರಲ್ಲಿ ಈ ನೌಕಾಪಡೆ ಕವಾಯತಿಗೆ ಜಪಾನ್ ಸೇರ್ಪಡೆಗೊಂಡಿತ್ತು. ಇಂಡೋ ಪೆಸಿಫಿಕ್ ಸಾಗರಪ್ರದೇಶದಲ್ಲಿ ತನ್ನ ಪ್ರಭಾವವನ್ನು ಕಡಿಮೆಗೊಳಿಸುವ ಪ್ರಯತ್ನವಾಗಿ ಈ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆಯೆಂದು ಚೀನಾ ಭಾವಿಸಿದೆ.

 ಟೋಕಿಯೋದಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಕ್ವಾಡ್ (ಅಮೆರಿಕ,ಜಪಾನ್,ಭಾರತ,ಆಸ್ಟ್ರೇಲಿಯ) ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಮಲಬಾರ್ ನೌಕಾಪಡೆಯ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯವನ್ನು ಸೇರ್ಪಡೆಗೊಳಿಸುವ ವಿಚಾರವಾಗಿ ಚರ್ಚಿಸಲಾಗಿತ್ತು. ಈ ಸಂದರ್ಭದಲ್ಲಿ ಭಾರತವು ಆಸ್ಟ್ರೇಲಿಯದ ಸೇರ್ಪಡೆಗೆ ತಾನು ಮುಕ್ತವಾದ ಮನಸ್ಸನ್ನು ಹೊಂದಿರುವುದಾಗಿ ತಿಳಿಸಿತ್ತು.

ಮಲಬಾರ್ ಸಮರಾಭ್ಯಾಸದಲ್ಲಿ ಆಸ್ಟ್ರೇಲಿಯದ ಸೇರ್ಪಡೆಗೆ ಜಪಾನ್ ಹಾಗೂ ಅಮೆರಿಕ ಹಲವಾರು ವರ್ಷಗಳಿಂದ ಆಗ್ರಹಿಸುತ್ತಾ ಬಂದಿವೆ. 2007ರಲ್ಲಿ ಚೀನಾದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯವನ್ನು ಭಾರತವು ಮತ್ತೆ ಸಮರಾಭ್ಯಾಸಕ್ಕೆ ಆಹ್ವಾನಿಸಿರಲಿಲ್ಲ.

 ಮಲಬಾರ್ ನೌಕಾಪಡೆ ಸಮರಾಭ್ಯಾಸವು ಇಂಡೋಪೆಸಿಫಿಕ್‌ನ ನಾಲ್ಕು ಪ್ರಜಾಪ್ರಭುತ್ವವಾದಿ ರಾಷ್ಟ್ರಗಳ ನಡುವೆ ಇರುವ ಗಾಢವಾದ ವಿಶ್ವಾಸವನ್ನು ಹಾಗೂ ಸಮಾನವಾದ ಭದ್ರತಾ ಹಿತಾಸಕ್ತಿಗಳಿಗೆ ಜೊತೆಯಾಗಿ ಶ್ರಮಿಸುವ ಅವುಗಳ ಇಚ್ಛಾಶಕ್ತಿಯನ್ನು ಪ್ರದರ್ಶಿಸಲಿದೆ. ಲಿಂಡಾ ರೆನಾಲ್ಡ್ಸ್

ಆಸ್ಟ್ರೇಲಿಯದ ರಕ್ಷಣಾ ಸಚಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News