ಮಂಗಳೂರು ಸೆಂಟ್ರಲ್ ಮಾರ್ಕೆಟ್: ಇನ್ನೂ ತೆರೆಯದ ಮುಖ್ಯದ್ವಾರಗಳು
ಮಂಗಳೂರು, ಅ.19: ಕೊರೋನ ಹಾವಳಿ ಕಾರಣ ಸುರಕ್ಷಿತ ಅಂತರ ಕಾಪಾಡುವ ನೆಪವೊಡ್ಡಿ ಮುಚ್ಚಲ್ಪಟ್ಟಿದ್ದ ನಗರದ ಸೆಂಟ್ರಲ್ ಮಾರ್ಕೆಟ್ ರಾಜ್ಯ ಹೈಕೋರ್ಟ್‌ನ ಆದೇಶದಂತೆ ಪುನಃ ತೆರೆಯಲ್ಪಟ್ಟರೂ ಇದರ ಹೆಬ್ಬಾಗಿಲು ಇನ್ನೂ ತೆರೆದಿಲ್ಲ. ಹಾಗಾಗಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಮಾರ್ಕೆಟ್ ಇದ್ದೂ ಇಲ್ಲದಂತಾಗಿದೆ.
ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಹೊರ ಭಾಗದ (ರಸ್ತೆ ಬದಿಯ) ಮಳಿಗೆಗಳಲ್ಲಿ ಶೇ.50 ರಷ್ಟು ವ್ಯಾಪಾರಿಗಳು ಮಾತ್ರ ವ್ಯವಹಾರ ಪುನರಾ ರಂಭಿಸಿದ್ದಾರೆ. ಆದರೆ ಒಳಭಾಗದ ಅಂಗಡಿಗಳು ತೆರೆದಿಲ್ಲ. ಆ ಪೈಕಿ ಹೆಚ್ಚಿನವರು ಅನಿವಾರ್ಯವಾಗಿ ಬೈಕಂಪಾಡಿಯ ಎಪಿಎಂಸಿಗೆ ತೆರಳಿ ವ್ಯಾಪಾರ ಮಾಡುತ್ತಿದ್ದಾರೆ. ಮಾರ್ಕೆಟ್ ಯಥಾಸ್ಥಿತಿಗೆ ಮರಳ ಬೇಕಾದರೆ ಐದು ದ್ವಾರಗಳನ್ನು ತೆರೆಯಬೇಕು. ಈಗಾಗಲೆ ರಾಜ್ಯ ಹೈಕೋರ್ಟ್ ಮಾರ್ಕೆಟ್ ಪುನರಾರಂಭಕ್ಕೆ ಅವಕಾಶ ಕಲ್ಪಿಸಿಕೊಡಲು ಮಂಗಳೂರು ಮಹಾನಗರ ಪಾಲಿಕೆಗೆ ಆದೇಶಿಸಿದ್ದರೂ ಮನಪಾ ಅಥವಾ ಜಿಲ್ಲಾಡಳಿತ ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ. ಇದನ್ನು ಪ್ರಶ್ನಿಸಿ ಕೆಲವು ವ್ಯಾಪಾರಸ್ಥರು ಮತ್ತೆ ಹೈಕೋರ್ಟ್‌ನ ಮೊರೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಹೈಕೋರ್ಟ್ ಸೂಚನೆ ಮೇರೆಗೆ ಮನಪಾವು ಸೆಂಟ್ರಲ್ ಮಾರ್ಕೆಟ್‌ನಲ್ಲಿ ಈ ಹಿಂದೆ ವ್ಯಾಪಾರ ಮಾಡುತ್ತಿದ್ದ ಅಧಿಕೃತ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಅದರಂತೆ ಅಧಿಕೃತ ವ್ಯಾಪಾರಿಗಳ ವಿವರಗಳನ್ನು ಸಂಗ್ರಹಿಸಿ ಅವರಿಗೆ ವ್ಯಾಪಾರವನ್ನು ಪುನರಾರಂಭಿಸಲು ಸೂಚಿಸಿದೆ. ಆದರೆ ಮಾರ್ಕೆಟ್‌ನ ಐದು ದ್ವಾರಗಳನ್ನು ತೆರೆಯದೆ ಮನಪಾ ಆಡಳಿತವು ಹೈಕೋರ್ಟ್‌ನ ಆದೇಶ ಪಾಲಿಸಲು ಮೀನಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ, ಮನಪಾ ಆಯುಕ್ತರನ್ನು ಹಲವು ಬಾರಿ ಮಾಡಿ ವಿನಂತಿಸಿದ ಬಳಿಕ ಇದೀಗ ವಿದ್ಯುತ್ ಪೂರೈಕೆ ಮರು ಜೋಡಣೆ ಮಾಡಲಾಗಿದೆ. ಆದರೆ ನಳ್ಳಿ ನೀರು ವ್ಯವಸ್ಥೆಯ ಸಂಪರ್ಕ ಬಾಕಿ ಇದೆ ಎನ್ನಲಾಗಿದೆ.
ಕಳೆದ ಸೆಪ್ಟಂಬರ್‌ನಲ್ಲಿ ಇಲ್ಲಿನ ವ್ಯಾಪಾರಿಗಳ ಪರವಾನಿಗೆ ಸಂಬಂಧಿತ ದಾಖಲೆ ಪತ್ರಗಳನ್ನು ಪಾಲಿಕೆ ಸಂಗ್ರಹಿಸಿದೆ. ಈ ಪೈಕಿ ಕೇವಲ 33 ವ್ಯಾಪಾರಸ್ಥರ ದಾಖಲೆ ಪತ್ರಗಳು ಮಾತ್ರ ಅಧಿಕೃತ ಎಂದು ಹೇಳಲಾಗುತ್ತಿದೆ.
ರಾಜ್ಯ ಹೈಕೋರ್ಟ್‌ನ ಸ್ಪಷ್ಟ ಆದೇಶವಿದ್ದರೂ ಮನಪಾ ಅಧಿಕಾರಿಗಳು ಮಾರ್ಕೆಟ್ ಪುನರಾರಂಭಕ್ಕೆ ಸಂಬಂಧಿಸಿ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಹಾಗಾಗಿ ನಾವು ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವ ಬಗ್ಗೆ ಯೋಚಿಸುತ್ತಿದ್ದೇವೆ.
-ಹಸನ್ ಕೆಮ್ಮಿಂಜೆ, ಅಧ್ಯಕ್ಷರು, ಮಂಗಳೂರು ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘ
ಜಿಲ್ಲಾಡಳಿತ, ಮನಪಾ ನಮ್ಮ ಬೇಡಿಕೆ ಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದೆ. ರಾಜ್ಯ ಹೈಕೋರ್ಟ್ ವ್ಯಾಪಾರ ಪುನರಾರಂಭಿಸಲು ಆದೇಶಿಸಿದ್ದರೂ ಯಾರದೋ ಒತ್ತಡಕ್ಕೆ ಮಣಿದು ಒಂದಲ್ಲೊಂದು ನೆಪವೊಡ್ಡಿ ಮಾರುಕಟ್ಟೆಯನ್ನು ಸಂಪೂರ್ಣವಾಗಿ ತೆರೆಯಲು ಹಿಂದೆಮುಂದೆ ನೋಡುತ್ತಿದೆ. ಇದರಿಂದ ಇಲ್ಲಿನ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಮಾರ್ಕೆಟ್‌ನ ಐದು ಪ್ರಮುಖ ದ್ವಾರಗಳನ್ನು ತೆರೆದು ಈ ಹಿಂದಿನಂತೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು. ಕಳೆದ ನಾಲ್ಕು ದಿನಗಳಿಂದ ಮನಪಾ ಅಧಿಕಾರಿಗಳು ಇದೀಗ ಕಟ್ಟಡದ ಧಾರಣಾ ಸಾಮರ್ಥ್ಯ ತಿಳಿಯುವುದಕ್ಕೆಂದು ಮಾರ್ಕೆಟ್‌ನ ಗೋಡೆಯನ್ನು ಅಲ್ಲಲ್ಲಿ ಕೊರೆಯುತ್ತಿದ್ದಾರೆ. ಇದು ಮುಂದೆ ಯಾವ ಹಂತಕ್ಕೆ ತಲುಪಬಹುದು ಎಂಬ ಆತಂಕ ಸೃಷ್ಟಿಯಾಗಿದೆ.
-ಅಮ್ಮಿ ಮಾರಿಪಳ್ಳ, ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಿ