ನ್ಯಾಯ ಒದಗಿಸದಿದ್ದರೆ ಡಿಸಿ, ಕಮಿಷನರ್ ಕಚೇರಿ ಎದುರು ಧರಣಿ: ಮಾಜಿ ಸಚಿವ ಜೈನ್ ಎಚ್ಚರಿಕೆ
ಮೂಡುಬಿದಿರೆ, ಅ.19: ಇಲ್ಲಿನ ಕಂದಾಯ ಇಲಾಖೆ, ಪೊಲೀಸ್ ಠಾಣೆ, ಪುರಸಭೆಯಲ್ಲಿ ಸಮರ್ಪಕವಾಗಿ ಕೆಲಸ ಕಾರ್ಯಗಳು ಆಗ್ತಾ ಇಲ್ಲ. ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ಮಿತಿ ಮೀರಿದೆ. ಸ್ಪಂದನೆ ಸಿಗುತ್ತಿಲ್ಲ. 25 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಪರಿಸ್ಥಿತಿಯನ್ನು ಕಂಡಿಲ್ಲ. ಅಧಿಕಾರಿಗಳು ನ್ಯಾಯಕ್ಕೆ ಒಲವು ತೋರದಿದ್ದರೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಪೊಲೀಸ್ ಕಮೀಷನರ್ ಕಚೇರಿಯೆದುರು ಧರಣಿ ನಡೆಸುವುದಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಎಚ್ಚರಿಕೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮುಲ್ಕಿಯಲ್ಲಿ ಮಹಿಳೆಯೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದರೂ ಪೊಲೀಸರು ಕೇಸು ದಾಖಲಿಸಿಲ್ಲ. ಮೂಡುಬಿದಿರೆ ತಹಶೀಲ್ದಾರರನ್ನು ಆಗಾಗೆ ವರ್ಗಾವಣೆ ಮಾಡುತ್ತಿದ್ದು ಪೂರ್ಣಾವಧಿ ತಹಶೀಲ್ದಾರ್ ಇಲ್ಲದೆ ಯಾವುದೇ ಕೆಲಸಗಳು ಸಮರ್ಪಕವಾಗಿ ಆಗುತ್ತಿಲ್ಲ ಎಂದು ದೂರಿದರು.
ತಾನು ಜನವಿರೋಧಿಯಾಗಿ ನಡೆದುಕೊಂಡಿದ್ದರೆ, ತನ್ನ ವಿರುದ್ಧವೂ ಪ್ರಕರಣ ಹಾಕಲಿ. ಅಧಿಕಾರಿಗಳು ಅಧಿಕಾರಸ್ಥರ ಪರ ಕೆಲಸ ಮಾಡುವುದು ತಪ್ಪಲ್ಲ. ಆದರೆ ಅನ್ಯಾಯವನ್ನು ಬೆಂಬಲಿಸುವುದು ತಪ್ಪು. ದೀನ ದಲಿತರ ಪರ ಹೋರಾಟವನ್ನು ಮುಂದುವರಿಸುವುದಾಗಿ ಅವರು ಹೇಳಿದರು.