ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ಮಸೂದೆಯ ಪ್ರತಿಗಾಗಿ ವಿಧಾನಸಭೆಯಲ್ಲಿ ಆಪ್ ಶಾಸಕರಿಂದ ಅಹೋರಾತ್ರಿ ಧರಣಿ

Update: 2020-10-20 16:12 GMT

ಚಂಡಿಗಡ,ಅ.20: ಕೇಂದ್ರದ ಕೃಷಿಕಾನೂನುಗಳ ವಿರುದ್ಧ ಪಂಜಾಬಿನ ಕಾಂಗ್ರೆಸ್ ಸರಕಾರವು ತರುತ್ತಿರುವ ಮಸೂದೆ ಹಾಗೂ ಸದನದಲ್ಲಿ ಮಂಡಿಸಲಾಗಿರುವ ಇತರ ಮಸೂದೆಗಳ ಪ್ರತಿಗಳನ್ನು ತಮಗೆ ಒದಗಿಸದ್ದನ್ನು ಪ್ರತಿಭಟಿಸಿ ಆಪ್ ಶಾಸಕರು ಸೋಮವಾರ ಅಹೋರಾತ್ರಿ ವಿಧಾನಸಭಾ ಸಂಕೀರ್ಣದಲ್ಲಿ ಧರಣಿ ನಡೆಸಿದರು.

ಕೇಂದ್ರದ ಕೃಷಿ ಕಾನೂನುಗಳನ್ನು ಕಡೆಗಣಿಸುವ ಮಸೂದೆಯ ಅಂಗೀಕಾರಕ್ಕಾಗಿ ಕರೆಯಲಾದ ವಿಶೇಷ ವಿಧಾನಸಭಾ ಅಧಿವೇಶನದ ಮೊದಲ ದಿನವಾದ ಸೋಮವಾರ ಮಸೂದೆಗಳ ಪ್ರತಿಗಳಿಗಾಗಿ ಆಗ್ರಹಿಸಿ ಆಪ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಕುಳಿತಿದ್ದರು. ಆದರೆ ಸದನವನ್ನು ಕೋವಿಡ್ ಸೋಂಕುಮುಕ್ತಗೊಳಿಸಬೇಕಿದೆ,ಇಲ್ಲದಿದ್ದರೆ ಮಂಗಳವಾರ ಅಧಿವೇಶನ ನಡೆಸುವುವಂತಿಲ್ಲ ಎಂದು ವಿಧಾನಸಭಾ ಸಿಬ್ಬಂದಿಗಳು ತಿಳಿಸಿದ ಬಳಿಕ ಆಪ್ ಶಾಸಕರು ತಮ್ಮ ಧರಣಿಯನ್ನು ಸದಸ್ಯರ ಲಾಂಜ್‌ಗೆ ಸ್ಥಳಾಂತರಿಸಿದ್ದರು.

ಸಂಜೆ ಐದು ಗಂಟೆಯೊಳಗೆ ಮಸೂದೆಯ ಪ್ರತಿಗಳನ್ನು ಒದಗಿಸುವುದಾಗಿ ವಿಧಾನಸಭಾ ಸಿಬ್ಬಂದಿಗಳು ಭರವಸೆ ನೀಡಿದ್ದರಾದರೂ ಅದು ಈಡೇರಿರಲಿಲ್ಲ. ಆಪ್ ಪ್ರತಿಭಟನೆಯು 2016ರಲ್ಲಿ ಆಗಿನ ಎಸ್‌ಎಡಿ-ಬಿಜೆಪಿ ಸರಕಾರದ ವಿರುದ್ಧ ಸದನದಲ್ಲಿ ಕಾಂಗ್ರೆಸ್‌ನ ಅಹೋರಾತ್ರಿ ಪ್ರತಿಭಟನೆಯನ್ನು ನೆನಪಿಸಿದೆ.

ವಿಶೇಷ ಅಧಿವೇಶನವನ್ನು ಕರೆಯುವ ಮುನ್ನ ಸರಕಾರವು ಎಲ್ಲ ರಾಜಕೀಯ ಪಕ್ಷಗಳು ಮತ್ತು ರೈತರ ಪ್ರತಿನಿಧಿಗಳು,ಕಾನೂನು ಮತ್ತು ಸಂವಿಧಾನ ತಜ್ಞರು ಹಾಗೂ ಕೃಷಿ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕಿತ್ತು ಎಂದು ಆಪ್ ಶಾಸಕ ಅಮನ್ ಅರೋರಾ ಹೇಳಿದರು.

ಕೇಂದ್ರದ ಕಾನೂನುಗಳ ವಿರುದ್ಧ ತಾನು ತರಲು ಬಯಸಿರುವ ಮಸೂದೆಗಳ ಕರಡು ಪ್ರತಿಯನ್ನು ಸರಕಾರವು ಪ್ರತಿಪಕ್ಷಗಳಿಗೆ ಅಥವಾ ರೈತರಿಗೆ ಒದಗಿಸದಿರುವುದು ವಿಷಾದಕರವಾಗಿದೆ. ಅದು ರೈತರ ರಕ್ಷಣೆಗಾಗಿ ಕಾನೂನು ತರುವಂತೆ ಕಂಡು ಬರುತ್ತಿಲ್ಲ. ಅದು 2022ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಕ್ಷಿಸಲು ಕಾನೂನು ತರುತ್ತಿರುವಂತಿದೆ ಎಂದರು.

ಕೃಷಿ ಕಾನೂನುಗಳ ಕುರಿತು ವಿಶೇಷ ಅಧಿವೇಶನವನ್ನು ಕರೆದಿರುವ ಅಮರಿಂದರ್ ಸಿಂಗ್ ಸರಕಾರವು ಅವುಗಳನ್ನು ಎದುರಿಸಲು ಏನು ಮಾಡಬೇಕು ಎಂಬ ಬಗ್ಗೆ ಶಾಸಕರಿಗೆ ಮಾಹಿತಿ ನೀಡದಿರುವುದು ಅಚ್ಚರಿಯ ವಿಷಯವಾಗಿದೆ. ಅದು ತರುತ್ತಿರುವ ಮಸೂದೆಯಾದರೂ ಏನು? ಕೋವಿಡ್ ನಿಯಮಗಳ ನೆಪದಲ್ಲಿ ಮಾಧ್ಯಮಗಳನ್ನೂ ಸದನದಿಂದ ಹೊರಗಿಡಲಾಗಿದೆ ಎಂದು ಇನ್ನೋರ್ವ ಆಪ್ ಶಾಸಕ ಕುಲ್ತಾರ್ ಸಿಂಗ್ ಸಂಧ್ವಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News