ಜನರಿಗೆ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿ: ರಾಧಾಕೃಷ್ಣ ಬೋರ್ಕರ್

Update: 2020-10-20 18:18 GMT

ಪುತ್ತೂರು, ಅ.20: ಸರಕಾರಿ ಸಾಲ ಸೌಲಭ್ಯಗಳು ಗ್ರಾಹಕರಿಗೆ ಸಿಗುವಂತೆ ಕ್ರಿಯಾಶೀಲವಾಗಿ ಕೆಲಸ ಮಾಡುವುದರೊಂದಿಗೆ ಸರಕಾರ ನಿಗದಿಪಡಿಸಿದ ಗುರಿ ತಲುಪಲು ಬ್ಯಾಂಕ್ ಸಿಬ್ಬಂದಿ ನೆರವಾಗಬೇಕು ಎಂದು ಪುತ್ತೂರು ತಾಪಂ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್ ಹೇಳಿದ್ದಾರೆ.
ತಾಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಪ್ರವೀಣ್ ಎಂ.ಪಿ. ಉಪಸ್ಥಿತಿಯಲ್ಲಿ ನಡೆದ ಪುತ್ತೂರಿನ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಕೃತ ಕೆಲವೊಂದು ಬ್ಯಾಂಕ್‌ಗಳಲ್ಲಿ ಗ್ರಾಹಕರಿಗೆ ಆಗುವ ತೊಂದರೆ ಮತ್ತು ಸರಕಾರಿ ಯೋಜನೆಗಳ ಸಾಲಕ್ಕೆ ಗ್ರಾಹಕರ ಅಲೆದಾಟದ ಕುರಿತು ಇತ್ತೀಚೆಗೆ ತಾಪಂ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಭೆ ನಡೆಸಲಾಗಿದೆ.

ಎಸ್‌ಬಿಐ ಬ್ಯಾಂಕ್ ಸಿಬ್ಬಂದಿ ಗ್ರಾಹಕರು ಸೇರಿದಂತೆ ಇಲಾಖೆಯ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದನ ಕೊಡುತ್ತಿಲ್ಲ. ಬಹುತೇಕ ಬ್ಯಾಂಕ್‌ಗಳಲ್ಲಿ ಸಿಬ್ಬಂದಿಗೆ ಕನ್ನಡ ಭಾಷೆಯ ಕೊರತೆ ಇದೆ. ಸರಕಾರದ ಯೋಜನೆಯಲ್ಲಿ ಫಲಾನುಭವಿಗೆ ಬರಬೇಕಾದ ಹಣವು ಬೇರೆಯವರ ಖಾತೆಗೆ ಜಮೆ ಆಗಿರುವುದು, ಐಎಫ್‌ಸಿ ಕೋಡ್ ಬದಲಾವಣೆ ಆಗಿರುವುದು, ಆತ್ಮನಿರ್ಭರ ಭಾರತದ ಕಲ್ಪನೆಯಡಿಯಲ್ಲಿ ಸಾಲ ಯೋಜನೆಗೆ ಸಂಬಂಧಿಸಿ ಒಂದಷ್ಟು ಬ್ಯಾಂಕ್‌ಗಳಲ್ಲಿ ಸಾಲ ಕೊಡಲು ಹಿಂಜರಿಯುತ್ತಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ಹಣಕ್ಕೆ ಸಂಬಂಧಿಸಿ ಫಲಾನುಭವಿಗಳಿಗೆ ಸಂದೇಶ ಬರುತ್ತದೆ. ಆದರೆ ಹಣ ಬಂದಿಲ್ಲ ಎಂದು ಅಧ್ಯಕ್ಷರು ಸಭೆಯಲ್ಲಿ ಪ್ರಸ್ತಾಪಸಿದರು.

ಜಿಲ್ಲಾ ಲೀಡ್ ಬ್ಯಾಂಕ್‌ನ ಮುಖ್ಯಪ್ರಬಂಧಕ ಪ್ರವೀಣ್ ಎಂ.ಪಿ. ಮಾತನಾಡಿ, ಪ್ರಧಾನಮಂತ್ರಿ ಆತ್ಮನಿರ್ಭರ ಭಾರತ, ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲೂ ಬೆಂಗಳೂರು ಬಳಿಕ ದ.ಕ. ಜಿಲ್ಲೆಯೇ ಹೆಚ್ಚಿನ ಸಬ್ಸಿಡಿ ಕ್ಲೈಮ್ ಮಾಡಿ ಹೆಗ್ಗಳಿಕೆಯಿದೆ.

1.22 ಲಕ್ಷ ರೂ. ಜನರಿಗೆ ಮುದ್ರಾ ಯೋಜನೆಯಲ್ಲಿ ಸಾಲ ನೀಡಲಾಗಿದೆ. ಬ್ಯಾಂಕ್‌ನಲ್ಲಿ ಸ್ಥಳೀಯ ಸಿಬ್ಬಂದಿ ಇಲ್ಲದೆ ಇರುವುದು, ಹೊರ ರಾಜ್ಯದಿಂದ ಬಂದ ಸಿಬ್ಬಂದಿಗೆ ಭಾಷಾ ಸಮಸ್ಯೆ ಹಾಗೂ ಕೆಲವೇ ಸಿಬ್ಬಂದಿಯಿದ್ದಲ್ಲಿ ತಾಳ್ಮೆ ಕಳೆದುಕೊಂಡಾಗ ಸಮಸ್ಯೆ ಉದ್ಭವಿಸಿದ್ದಿರಬಹುದು. ಆದರೆ ಸಮಸ್ಯೆಗಳಿದ್ದರೆ ದೂರು ನೀಡಿ. ಚರ್ಚಿಸಿ ತಿದ್ದುಕೊಳ್ಳುವುದು ಅಗತ್ಯ ಎಂದರು.

ಕನ್ನಡೇತರ ಬ್ಯಾಂಕ್ ಅಧಿಕಾರಿಗಳು ಕನ್ನಡ ಕಲಿಯಬೇಕು ಎಂಬ ಸಾರ್ವಜನಿಕರ ಆಗ್ರಹದ ಮೇರೆಗೆ ಈ ವಿಚಾರಕ್ಕೆ ಒತ್ತು ನೀಡಲಾಗಿದೆ. ಜೊತೆಗೆ ಈಗಾಗಲೇ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಕಲಿಸಲಾಗುತ್ತಿದೆ. ಗ್ರಾಹಕರಿಗೆ ಸರಿಯಾದ ಮಾರ್ಗದರ್ಶನ ನೀಡಲು ಎಲ್ಲಾ ಬ್ಯಾಂಕ್‌ಗಳಲ್ಲೂ ಸ್ಥಳೀಯ ಒಬ್ಬ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಪ್ರವೀಣ್ ತಿಳಿಸಿದರು.

ವೇದಿಕೆಯಲ್ಲಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ತಹಶೀಲ್ದಾರ್ ರಮೇಶ್ ಟಿ. ಬಾಬು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಕೆನರಾ ಬ್ಯಾಂಕ್ ಪ್ರಬಂಧಕ ನಂಜುಡಪ್ಪಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News