ಎಚ್-1ಬಿ ವೀಸಾ ನಿಯಮಗಳಲ್ಲಿ ಬದಲಾವಣೆ: ನ್ಯಾಯಾಲಯದಲ್ಲಿ ಪ್ರಶ್ನಿಸಿದ ವಾಣಿಜ್ಯ ಸಂಸ್ಥೆಗಳು

Update: 2020-10-20 18:46 GMT

ವಾಶಿಂಗ್ಟನ್, ಅ. 20: ಅಮೆರಿಕ ಸರಕಾರವು ಇತ್ತೀಚೆಗೆ ಜಾರಿಗೆ ತಂದಿರುವ ಎಚ್-1ಬಿ ವೀಸಾ ನಿಯಮಾವಳಿಗಳನ್ನು ಅಮೆರಿಕ ವಾಣಿಜ್ಯ ಸಂಸ್ಥೆ, ಉತ್ಪಾದಕರ ರಾಷ್ಟ್ರೀಯ ಸಂಘ (ಎನ್‌ಎಎಮ್) ಮತ್ತು ಇತರ ಹಲವಾರು ಸಂಘಟನೆಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ನೂತನ ನಿಯಮಾವಳಿಗಳು ಅತ್ಯುನ್ನತ ಕೌಶಲ ಹೊಂದಿರುವ ವಿದೇಶಿ ಉದ್ಯೋಗಿಗಳು ಅಮೆರಿಕಕ್ಕೆ ವಲಸೆ ಬರುವುದನ್ನು ತಡೆಯುತ್ತವೆ ಎಂದು ಈ ಸಂಸ್ಥೆಗಳು ಆರೋಪಿಸಿವೆ.

ಈ ತಿಂಗಳ ಆದಿ ಭಾಗದಲ್ಲಿ, ಅಮೆರಿಕದ ಆಂತರಿಕ ಭದ್ರತಾ ಇಲಾಖೆಯು ತನ್ನ ಅಂತಿಮ ಮಧ್ಯಂತರ ನಿಯಮದಲ್ಲಿ ‘ವಿಶಿಷ್ಟ ಉದ್ಯೋಗ’ದ ವ್ಯಾಖ್ಯೆಯನ್ನು ಕಿರಿದುಗೊಳಿಸಿತ್ತು. ಈ ಮೊದಲಿದ್ದ ನಿಯಮಗಳು ವ್ಯವಸ್ಥೆಯನ್ನು ದುರುಪಯೋಗಪಡಿಸಲು ಸಹಾಯ ಮಾಡುತ್ತಿದ್ದವು ಎಂದು ಹೇಳಿ ಅವುಗಳನ್ನು ರದ್ದುಪಡಿಸಿತ್ತು.

ನಾರ್ದರ್ನ್ ಕೊಲಂಬಿಯ ಜಿಲ್ಲೆಯ ನ್ಯಾಯಾಲಯದಲ್ಲಿ ಸೋಮವಾರ ಮೊಕದ್ದಮೆಯನ್ನು ಹೂಡಲಾಗಿದೆ. ‘‘ಅಪಾಯಕಾರಿ ಎಚ್-1ಬಿ ವೀಸಾ ನಿಯಮಗಳನ್ನು ಮುಂದುವರಿಯಲು ಬಿಟ್ಟರೆ, ಅವು ಅಮೆರಿಕದಲ್ಲಿರುವ ಲಕ್ಷಾಂತರ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತವೆ ಹಾಗೂ ಅತ್ಯುನ್ನತ ಕೌಶಲದ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಕಂಪೆನಿಗಳ ಸಾಮರ್ಥ್ಯವನ್ನು ಕಸಿದುಕೊಳ್ಳುತ್ತವೆ’’ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ.

ಅಮೆರಿಕದ ಪ್ರಮುಖ ತಂತ್ರಜ್ಞಾನ ಕಂಪೆನಿಗಳು ಎಚ್-1ಬಿ ವೀಸಾಗಳನ್ನು ಬಳಸಿಕೊಂಡು ವಿದೇಶಗಳ ಅತ್ಯುನ್ನತ ಕೌಶಲದ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News