‘ಬೆನ್ನು’ವಿನ ಮೇಲೆ ಇಳಿದು ಮಾದರಿ ಸಂಗ್ರಹಿಸಿದ ಕ್ಷುದ್ರಗ್ರಹ ಶೋಧಕ

Update: 2020-10-21 17:49 GMT

ವಾಶಿಂಗ್ಟನ್, ಅ. 21: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ (ನಾಸಾ)ನ ಬಾಹ್ಯಾಕಾಶ ನೌಕೆ ‘ಒಸಿರಿಸ್-ರೆಕ್ಸ್’ ಮಂಗಳವಾರ ಕ್ಷುದ್ರ ಗ್ರಹ (ಚಿಕ್ಕ ಗ್ರಹ) ‘ಬೆನ್ನು’ವಿನ ಬಂಡೆಕಲ್ಲು ಆವರಿತ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿದಿದೆ.

ನಾಲ್ಕು ವರ್ಷಗಳ ಹಿಂದೆ ಪ್ರಯಾಣ ಆರಂಭಿಸಿದ ನೌಕೆಯು ಕ್ಷುದ್ರ ಗ್ರಹದ ಮೇಲಿನ ಅಲ್ಪ ಕಾಲದ ವಾಸ್ತವ್ಯದ ವೇಳೆ, ಅದರ ಕಲ್ಲು ಮತ್ತು ಧೂಳಿನ ಮಾದರಿಗಳನ್ನು ಸಂಗ್ರಹಿಸಿತು. ಈ ನಿಖರ ಕಾರ್ಯಾಚರಣೆ ಭೂಮಿಯಿಂದ ಸುಮಾರು 33 ಕೋಟಿ ಕಿಲೋಮೀಟರ್ ದೂರದಲ್ಲಿ ನಡೆಯಿತು.

ಈ ಕಾರ್ಯಾಚರಣೆಯ ಜವಾಬ್ದಾರಿಯನ್ನು ಕೊಲರಾಡೊ ರಾಜ್ಯದ ಡೆನ್ವರ್ ನಗರದಲ್ಲಿರುವ ಲಾಕ್‌ಹೀಡ್ ಮಾರ್ಟಿನ್ ಸ್ಪೇಸ್ ನಿಭಾಯಿಸಿತು. ಅಲ್ಲಿನ ಅಧಿಕಾರಿಯೊಬ್ಬರು ‘‘ಮೇಲ್ಮೈ ಸ್ಪರ್ಶ ಆರಂಭವಾಗಿದೆ ಹಾಗೂ ಮಾದರಿಗಳ ಸಂಗ್ರಹ ಕಾರ್ಯ ಚಾಲ್ತಿಯಲ್ಲಿದೆ’’ ಎಂಬುದಾಗಿ ಘೋಷಿಸಿದಾಗ, ವಿಜ್ಞಾನಿಗಳು ಸಂಭ್ರಮ ವ್ಯಕ್ತಪಡಿಸಿದರು.

ಬಾಹ್ಯಾಕಾಶ ನೌಕೆಯು 16 ಸೆಕೆಂಡ್‌ಗಳ ಕಾಲ ‘ಬೆನ್ನು’ವಿನ ಮೇಲ್ಮೈಯಲ್ಲಿತ್ತು. ಈ ಕಾರ್ಯಾಚರಣೆಗಾಗಿ ಅದು 12 ವರ್ಷಗಳ ಸಿದ್ಧತೆಯನ್ನು ನಡೆಸಿತ್ತು. ಈ 16 ಸೆಕೆಂಡ್‌ಗಳ ಅವಧಿಯಲ್ಲಿ ಅದು ಕನಿಷ್ಠ 60 ಗ್ರಾಮ್‌ನಷ್ಟು ಮಾದರಿಯನ್ನು ಸಂಗ್ರಹಿಸಿತು.

ಈ ಮಾದರಿಗಳು ನಮ್ಮ ಸೌರವ್ಯೂಹದ ಮೂಲವನ್ನು ಪತ್ತೆಹಚ್ಚಲು ನೆರವಾಗಬಹುದು ಎಂಬ ಭರವಸೆಯನ್ನು ವಿಜ್ಞಾನಿಗಳು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News