ಪೊಲೀಸರ ಮೇಲೆ ಒತ್ತಡ: ಸೇನೆಯಿಂದ ತನಿಖೆಗೆ ಆದೇಶ

Update: 2020-10-21 18:27 GMT

ಇಸ್ಲಾಮಾಬಾದ್ (ಪಾಕಿಸ್ತಾನ), ಅ. 21: ಪಾಕಿಸ್ತಾನದ ಅರೆಸೈನಿಕ ಪಡೆಗಳು ಸಿಂಧ್ ಪ್ರಾಂತದ ಪೊಲೀಸ್ ಮುಖ್ಯಸ್ಥ ಮುಶ್ತಾಖ್ ಮೆಹರ್‌ರನ್ನು ಬಲವಂತವಾಗಿ ಅವರ ಮನೆಯಿಂದ ಕರೆದುಕೊಂಡು ಹೋಗಿ, ಮಾಜಿ ಪ್ರಧಾನಿ ನವಾಝ್ ಶರೀಫ್‌ರ ಅಳಿಯನನ್ನು ಬಂಧಿಸುವಂತೆ ಒತ್ತಡ ಹೇರಿದ ಆರೋಪಗಳ ಬಗ್ಗೆ ದೇಶದ ಸೇನಾ ಮುಖ್ಯಸ್ಥರು ತನಿಖೆಗೆ ಆದೇಶಿಸಿದ್ದಾರೆ.

ಮುಶ್ತಾಖ್ ಮೆಹರ್ ಮತ್ತು ಇತರ 50ಕ್ಕೂ ಹೆಚ್ಚು ಹಿರಿಯ ಪೊಲೀಸ್ ಅಧಿಕಾರಿಗಳು ರಜೆಯಲ್ಲಿ ತೆರಳಲು ಮಂಗಳವಾರ ಅರ್ಜಿ ಸಲ್ಲಿಸಿದ ಬಳಿಕ ಈ ತನಿಖೆಗೆ ಆದೇಶ ನೀಡಲಾಗಿದೆ. ಅವರೆಲ್ಲರೂ ತಮ್ಮ ರಜಾ ಅರ್ಜಿಗಳಲ್ಲಿ ಈ ಘಟನೆಯನ್ನು ಒಂದೇ ರೀತಿಯಾಗಿ ವಿವರಿಸಿದ್ದಾರೆ.

ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಜೆಯಲ್ಲಿ ಹೋಗುವ ತಮ್ಮ ನಿರ್ಧಾರವನ್ನು ಪೊಲೀಸ್ ಅಧಿಕಾರಿಗಳು 10 ದಿನಗಳ ಕಾಲ ಮುಂದೂಡಿದ್ದಾರೆ ಎಂದು ಬುಧವಾರ ಸಿಂಧ್ ಪೊಲೀಸ್ ಇಲಾಖೆ ತಿಳಿಸಿದೆ.

ನವಾಜ್ ಶರೀಫ್‌ರ ಪುತ್ರಿ ಮರ್ಯಮ್ ನವಾಝ್‌ರ ಪತಿ ಮುಹಮ್ಮದ್ ಸಫ್ದರ್ ತನ್ನ ಕುಟುಂಬದೊಂದಿಗೆ ಹೊಟೇಲ್‌ನಲ್ಲಿ ತಂಗಿದ್ದಾಗ, ಸೋಮವಾರ ಮುಂಜಾನೆ ಅವರ ಕೋಣೆಯ ಬಾಗಿಲನ್ನು ಮುರಿದು ಪ್ರವೇಶಿಸಿದ ಪೊಲೀಸರು ಬಂಧಿಸಿದ್ದರು.

ಇದಕ್ಕೂ ಒಂದು ದಿನ ಮೊದಲು, ಅಂದರೆ ರವಿವಾರ ದೇಶದ ಪ್ರತಿಪಕ್ಷಗಳು ಇಮ್ರಾನ್ ಖಾನ್ ಸರಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News