ಉಡುಪಿ: ನಾಲ್ವರು ಅಂತಾರಾಜ್ಯ ಸರ ಕಳವು ಆರೋಪಿಗಳು ಸೆರೆ

Update: 2020-10-22 11:09 GMT

ಉಡುಪಿ, ಅ. 22: ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಕಳವು ಮಾಡುತಿದ್ದ ನಾಲ್ವರು ಅಂತರ್ ‌ರಾಜ್ಯ ಸರ ಕಳವು ಆರೋಪಿಗಳನ್ನು ಉಡುಪಿ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ ಪೊಲೀಸರು ಉಡುಪಿ ಶ್ರೀಕೃಷ್ಣ ಮಠ ಪಾರ್ಕಿಂಗ್ ಸ್ಥಳದ ಬಳಿ ಬಂಧಿಸಿದ್ದಾರೆ.

ಬಂಧಿತರನ್ನು ಇರಾನಿ ಗ್ಯಾಂಗ್‌ಗೆ ಸೇರಿದ ಅಂತಾರಾಜ್ಯ ವಂಚಕರಾದ ಮಹಾರಾಷ್ಟ್ರ ರಾಜ್ಯದ ಅಹ್ಮದ್‌ನಗರ ಜಿಲ್ಲೆ ಶ್ರೀರಾಮಪುರದ ಝಾಕಿರ್ ಹುಸೈನ್ (26), ಕಂಬರ್ ರಹೀಮ್ ಮಿರ್ಜಾ (32), ಅಕ್ಷಯ್ ಸಂಜಯ್ ಗೋಸಾವಿ (22) ಹಾಗೂ ಶಾರುಖ್ ಬಂದೆನವಾಝ್ ಶೇಖ್ (24) ಎಂದು ಗುರುತಿಸಲಾಗಿದೆ.

ಇವರು ಹೊಸದಿಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು ಹಾಗೂ ಗಂಡಸರು ನಡೆದುಕೊಂಡು ಹೋಗುವಾಗ ಮಾತಿಗೆಳೆದು ನಾವು ಪೊಲೀಸರು, ಮುಂದೆ ಗಲಾಟೆ ನಡೆಯುತ್ತಿದೆ. ನಿಮ್ಮ ಚಿನ್ನಾಭರಣಗಳನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಅವರಲ್ಲಿದ್ದ ಎಲ್ಲಾ ಚಿನ್ನಾಭರಣಗಳನ್ನು ಪಡೆದು ಬ್ಯಾಗಿನಲ್ಲಿ ಹಾಕಿ ಕೊಡುವಂತೆ ನಂಬಿಸಿ, ಅವರಿಗೆ ತಿಳಿಯ ದಂತೆ ಅವುಗಳನ್ನು ಮೋಸದಿಂದ ಎಗರಿಸುವುದರಲ್ಲಿ ಪರಿಣಿತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಇವರು ನಡೆಸಿದ ಕೃತ್ಯಗಳಲ್ಲಿ ಉಡುಪಿ ನಗರ-1, ಕುಂದಾಪುರ-1, ವಿಜಯಪುರ-4, ಚಿಕ್ಕಮಗಳೂರು-1, ಬಂಟ್ವಾಳ-1 ಹಾಗೂ ಮಂಗಳೂರು ಉರ್ವಾದಲ್ಲಿ ಒಂದು ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ಇನ್ನೂ ಅನೇಕ ಕಡೆಗಳಲ್ಲಿ ಅವರು ಇದೇ ರೀತಿ ಕೃತ್ಯಗಳನ್ನು ಎಸಗಿರುವುದು ಗೊತ್ತಾಗಿದೆ.

ನಾಲ್ವರು ಆರೋಪಿಗಳನ್ನು ಬಂಧಿಸುವ ವೇಳೆ ಮಂಗಳೂರಿನಲ್ಲಿ ನಡೆಸಿದ ಕೃತ್ಯದ 12 ಗ್ರಾಂ ತೂಕದ ಚಿನ್ನದ ಚೈನ್ ಸುಸ್ಥಿತಿಯಲ್ಲಿ ಸಿಕ್ಕಿದು, ಅವರಿಂದ ಕೃತ್ಯಕ್ಕೆ ಬಳಸಿದ ಕಾರು, ಹೊಂಡಾ ಶೈನ್ ಬೈಕ್, ಎರಡು ಹೆಲ್ಮೆಟ್ ಹಾಗೂ ನಗದು 5,100 ರೂ.ಳನ್ನು ವಶಪಡಿಸಿಕೊಳ್ಳಲಾಗಿದೆ.

ನ್ಯಾಯಾಲಯದಿಂದ ಇವರನ್ನು ಪೊಲೀಸ್ ಕಸ್ಟಡಿಗೆ ಪಡೆದು, ಇವರು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರ ರಾಜ್ಯದ ಅಹ್ಮದ್ ನಗರದ ಶ್ರೀರಾಮ್‌ಪುರದ ಚಿನ್ನದ ಅಂಗಡಿಯಿಂದ 65ಗ್ರಾಂ ಚಿನ್ನವನ್ನು ಸ್ವಾಧೀನ ಪಡೆಸಿಕೊಳ್ಳಲಾಗಿದೆ. ಆರೋಪಿಗಳಿಂದ ಇದುವರೆಗೆ ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ವಿಷ್ಣುವರ್ಧನ್ ಎನ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ಹಾಗೂ ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಆರ್. ಜೈಶಂಕರ್ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ವೃತ್ತದ ಸಿಪಿಐ ಮಂಜುನಾಥ, ಡಿಸಿಐಬಿ ಪೊಲೀಸ್ ನಿರೀಕ್ಷಕ ಮಂಜುನಾಥ ಡಿ.ಆರ್. ಹಾಗೂ ಸಿಬ್ಬಂದಿಗಳು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News