"ಸುರೇಂದ್ರ ಬಂಟ್ವಾಳ್ ಕೊಲೆ‌ ನಡೆಸಿದ್ದು ನಾನೇ !"

Update: 2020-10-22 12:03 GMT
ಸುರೇಂದ್ರ

ಬಂಟ್ವಾಳ, ಅ. 22: ರೌಡಿ ಶೀಟರ್, ನಟ ಸುರೇಂದ್ರ ಭಂಡಾರಿ ಬಂಟ್ವಾಳ್ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಹಂತಕರ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಶೀಘ್ರದಲ್ಲೇ ಹಂತಕರ ಬಂಧನ ಆಗಲಿದೆ ಎಂದು ಪೊಲೀಸರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೆ. 24ರಂದು ಉಡುಪಿ ಹಿರಿಯಡ್ಕದಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆಗೆ ಪ್ರತಿಕಾರವಾಗಿ ಸುರೇಂದ್ರ ಬಂಟ್ವಾಳ್ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆಡಿಯೊ ಒಂದು ಸಾಮಾಜಿಕ ಜಾಲತಾಣ ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದ್ದು, ಸುರೇಂದ್ರ ಬಂಟ್ವಾಳ್ ಅವರ ಆಪ್ತ ಸ್ನೇಹಿತ ಸತೀಶ್ ಕುಲಾಲ್ ಎಂಬಾತ ಈ ಆಡಿಯೋ ಸಂದೇಶ ರವಾನಿಸಿದ್ದು ಎಂದು ಹೇಳಲಾಗುತ್ತಿದ್ದು, ಸುರೇಂದ್ರ ಬಂಟ್ವಾಳ ಅವರ ಕೊಲೆ ನಾನೇ ಮಾಡಿದ್ದು. ಇದು ಕಿಶನ್ ಹೆಗ್ಡೆ ಕೊಲೆಗೆ ಪ್ರತೀಕಾರವಾಗಿದೆ ಎಂದು ಆಡಿಯೋದಲ್ಲಿ ಹೇಳಿಕೊಂಡಿದ್ದಾನೆ.

''ನಾನು 22  ವರ್ಷಗಳಿಂದ ಸುರೇಂದ್ರ ಜೊತೆ ಒಟ್ಟಿಗೆ ಇದ್ದು ಅವರ ಎಲ್ಲಾ ವ್ಯವಹಾರ ನನಗೆ ಗೊತ್ತಿತ್ತು. ಸುರೇಂದ್ರ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಆ ಪಾಪದ ಹಣವನ್ನು ಕಿಶನ್ ಹೆಗ್ಡೆ ಅವರಂತಹ ಒಳ್ಳೆಯ ವ್ಯಕ್ತಿಗಳ ಕೊಲೆಗೆ ದುರುಪಯೋಗ ಮಾಡುತ್ತಿದ್ದ. ಕಿಶನ್ ಹೆಗ್ಡೆ ಹತ್ಯೆಗೆ ಸುರೇಂದ್ರ ಹಣ ಸಹಾಯ ಮಾಡಿದ್ದ. ಈ ವಿಚಾರ ನನಗೆ ತಿಳಿದಿತ್ತು. ನಾನು ಸುರೇಂದ್ರಗೆ ಹೇಳಿದೆ. ನೀನು ತಪ್ಪು ಮಾಡುತ್ತಿದ್ದಿ, ನಿನಗೆ ಇದೆಲ್ಲಾ ಬೇಡ ಎಂದು. ಅದಕ್ಕೆ ನೀನು ಈ ವಿಚಾರ ಹೊರಗಡೆ ಹೇಳಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅನಾಮಧೇಯ ವ್ಯಕ್ತಿಯೊಬ್ಬನಿಗೆ ಸುರೇಂದ್ರ ಕರೆ ಮಾಡಿ ಕಿಶನ್ ಹೆಗ್ಡೆ ಕೊಲೆ ನಡೆಸಿದ ತಂಡದ ನಾಯಕ ಮನೋಜ್ ಕೋಡಿಕೆರೆಯನ್ನು ಜೈಲಿನಲ್ಲಿ ಭೇಟಿ ಮಾಡಿ ಒಂದೂವರೆ ಲಕ್ಷ ರೂ. ಹಣ ಮತ್ತು ಬಟ್ಟೆ ನೀಡಿದ್ದೇನೆ. ಇದಕ್ಕೆ ನಿಮ್ಮ ಸಹಾಯ ಬೇಕು ಎಂದು ಹೇಳಿದ್ದ. ಈ ವೇಳೆ ನನಗೆ ಕೋಪ ಮತ್ತು ಬೇಸರ ವಾಗಿತ್ತು. ಇನ್ನು ಹೀಗೆ ಮುಂದುವರಿದರೆ ಕೋಡಿಕೆರೆ ಮನೋಜ್ ಮತ್ತು ಸುರೇಂದ್ರ ಬಂಟ್ವಾಳ್ ಸೇರಿ ಇನ್ನೂ ಅನೇಕ ಅಮಾಯಕರ ಕೊಲೆ ನಡೆಸುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಈ ಕೊಲೆ ಮಾಡಿದ್ದೇನೆ. ನಾನು ಈಗ ಕಾರವಾರದಲ್ಲಿ ಇದ್ದೇನೆ. ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಪೊಲೀಸರಿಗೆ ಶರಣಾಗುತ್ತೇನೆ'' ಎಂದು ಆತ ಆಡಿಯೊದಲ್ಲಿ ತಿಳಿಸಿದ್ದಾನೆ.

ಈ ಆಡಿಯೋವನ್ನು ಕೂಡಾ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News