ಬಂದರ್‌ನಲ್ಲಿ ಕಾರ್ಮಿಕರ ಮುಷ್ಕರ, ಸಗಟು ಮಾರುಕಟ್ಟೆ ವಹಿವಾಟು ಬಂದ್

Update: 2020-10-22 12:20 GMT

ಮಂಗಳೂರು, ಅ.22: ಹಳೆ ಬಂದರು ಸಗಟು ಮಾರುಕಟ್ಟೆಯ ಸ್ಮಾರ್ಟ್ ಸಿಟಿ ಯೋಜನೆಯ ಒಳಚರಂಡಿ ಕಾಮಗಾರಿಯಿಂದಾಗಿ ರಸ್ತೆಯು ಹದಗೆಟ್ಟಿದೆ. ಇದನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಬಂದರು ಕಾರ್ಮಿಕರ ಕಟ್ಟೆ ಬಳಿ ಗುರುವಾರ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕಾರ್ಮಿಕರ ಕಟ್ಟೆ ಬಳಿ ಜಮಾಯಿಸಿದ ಕಾರ್ಮಿಕರು ಪ್ರತಿಭಟನೆ ನಡೆಸಿದರೆ ವರ್ತಕರು ಸಗಟು, ಮಾರುಕಟ್ಟೆ ವಹಿವಾಟು ಸ್ಥಗಿತಗೊಳಿಸಿ ಮುಷ್ಕರದಲ್ಲಿ ಪಾಲ್ಗೊಂಡರು. ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಪ್ರತಿಭಟನೆಯನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಕಾರ್ಪೊರೇಟರ್ ಅಬ್ದುಲ್ ಲತೀಫ್ ಸರಕಾರ ಯಾವುದೇ ಇರಲಿ, ಅಧಿಕಾರ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನರ ಸೇವೆ ಮಾಡಬೇಕೆ ಹೊರತು ಅಭಿವೃದ್ಧಿಯಲ್ಲಿ ಎಂದಿಗೂ ರಾಜಕೀಯ ಮಾಡುವುದು ಯಾವುದೇ ರಾಜಕಾರಣಿಗೆ ಶೋಭೆ ತರುವುದಿಲ್ಲ ಎಂದರು.

ಸ್ಥಳೀಯ ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾವುದೇ ಅಭಿವೃದ್ಧಿ ಸಾಧ್ಯವಾಗದು. ಸ್ಮಾರ್ಟ್ ಸಿಟಿ ಯೋಜನೆಯ ಅನುಷ್ಠಾನ ದಲ್ಲಿ ಅನೇಕ ಲೋಪಗಳು ಮತ್ತು ವಿಳಂಬ ಆಗುತ್ತಿದೆ. ಹಳೆ ಬಂದರು ನಗರದ ಪ್ರಮುಖ ವಾಣಿಜ್ಯ ಕೇಂದ್ರ ಮಂಗಳೂರಿನ ಆರ್ಥಿಕತೆಯ ಹೃದಯವಾಗಿದೆ. ಇಂತಹ ಪ್ರದೇಶಗಳ ಬಗ್ಗೆ ಸ್ಮಾರ್ಟ್‌ಸಿಟಿ ಕಂಪನಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ ಎಂದು ಹೇಳಿದರು.

ಹಳೆ ಬಂದರಿನ ಪೋರ್ಟ್ ರಸ್ತೆ, ಚೇಂಬರ್ ರಸ್ತೆ, ಜೆಎಂ ರಸ್ತೆ, ಕೃಷ್ಣ ಮಿಲ್ ರಸ್ತೆ, ಡಾ.ಅನ್ಸಾರಿ ರಸ್ತೆಗಳು ಒಳ ಚರಂಡಿ ಕಾಮಗಾರಿಗೆ ಬಲಿಯಾ ಗಿದೆ. ಹದಗೆಟ್ಟು ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ಕಾರ್ಮಿಕರು ಕೈಗಾಡಿ ಎಳೆದು ದುಡಿಯುವುದು ಬಹಳ ಅಪಾಯಕಾರಿಯಾಗಿದೆ. ರಸ್ತೆ ಸಮಸ್ಯೆ ಪರಿಹರಿಸಲು ಸ್ಥಳೀಯ ಶಾಸಕರು ಸಭೆ ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಅಧಿಕಾರಿಗಳು ಮಾತ್ರ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಒಂದು ತಿಂಗಳ ಗಡುವು ನೀಡುತ್ತೇವೆ. ರಸ್ತೆ ದುರಸ್ಥಿ ಆಗದಿದ್ದರೆ ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ಕೈಗಾಡಿಗಳ ಜಾಥಾ ಮಾಡಿ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಂದರು ಶ್ರಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮತ್ತು ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಎಚ್ಚರಿಕೆ ನೀಡಿದರು.

ಜಿಲ್ಲಾ ಹಮಾಲಿ ಕಾರ್ಮಿಕರ ಫೆಡರೇಷನ್ ಕಾರ್ಯದರ್ಶಿ ರಫೀಕ್ ಹರೇಕಳ, ಗ್ರಾಪಂ ಸದಸ್ಯ ಅಶ್ರಫ್ ಹರೇಕಳ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫಾ, ಕಾರ್ಯದರ್ಶಿ ಹರೀಶ್ ಪೂಜಾರಿ, ಬಂದರು ಶ್ರಮಿಕರ ಸಂಘದ ಮುಖಂಡರಾದ ಚಂದ್ರಹಾಸ್ ಕುತ್ತಾರ್, ಫಾರೂಕ್ ಉಳ್ಳಾಲ್, ಮಜೀದ್ ಉಳ್ಳಾಲ್, ಸಿದ್ದೀಕ್ ಬೆಂಗ್ರೆ, ಯಲ್ಲಪ್ಪ, ಹರೀಶ್ ಕೆರೆಬೈಲ್, ಹಂಝ ತಂದೊಳಿಗೆ, ರಿಕ್ಷಾ ಮತ್ತು ಟೆಂಪೋ ಚಾಲಕರ ಸಂಘದ ಮುಖಂಡರಾದ ಸಂದೀಪ್, ಅನೂಪ್, ಶರತ್, ಇಸ್ಮಾಯಿಲ್, ಅಬ್ದುಲ್ಲ, ರಾಘವ ಪಾಲ್ಗೊಂಡಿದ್ದರು.
ಸಂಘದ ಉಪಾಧ್ಯಕ್ಷ ಹಸನ್ ಮೋನು ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News