ಹೆಣ್ಮಕ್ಕಳಿಗೆ ಕಿರುಕುಳ ಪ್ರಕರಣ ಹೆಚ್ಚಳ, ಯುವಕರಿಗೂ ಜಾಗೃತಿ ಶಿಬಿರ ಆಯೋಜನೆ : ಶ್ಯಾಮಲಾ ಕುಂದರ್

Update: 2020-10-22 12:24 GMT

ಮಂಗಳೂರು, ಅ.22: ದೇಶಾದ್ಯಂತ ಹೆಣ್ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ, ಕಿರುಕುಳ ಪ್ರಕರಣ ಹೆಚ್ಚುತ್ತಿದ್ದು, ಆಯೋಗವು ಇದನ್ನು ಗಂಭೀರ ವಾಗಿ ಪರಿಗಣಿಸಿದೆ. ಈ ಮಧ್ಯೆ ಆತ್ಮರಕ್ಷಣೆಗಾಗಿ ಹೆಣ್ಮಕ್ಕಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮದ ಜೊತೆಗೆ ಯುವಕರಿಗೂ ಈ ನಿಟ್ಟಿನಲ್ಲಿ ಜಾಗೃತಿ ಶಿಬಿರ ಆಯೋಜಿಸಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್.ಕುಂದರ್ ತಿಳಿಸಿದ್ದಾರೆ.

ಗುರುವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೆಣ್ಮಕ್ಕಳ ಮೇಲೆ ದೌರ್ಜನ್ಯ, ಕಿರುಕುಳ ನಡೆಯುತ್ತಿದೆ. ಹೆಣ್ಮಕ್ಕಳ ಮೇಲೆ ಸೈಬರ್ ಕ್ರೈಂ ಪ್ರಕರಣವೂ ಹೆಚ್ಚುತ್ತಿದೆ. ಯುವಕರು ಯಾತಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂಬುದನ್ನೂ ತಿಳಿದುಕೊಳ್ಳಬೇಕಾಗಿದೆ. ಅಲ್ಲದೆ ಕಿರುಕುಳ ನೀಡಿದರೆ ಆಗುವ ಪರಿಣಾಮಗಳ ಬಗ್ಗೆಯೂ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. ಹಾಗಾಗಿ ದಾರಿತಪ್ಪುವ ಯುವಕರಿಗೆ ಮಾಹಿತಿ ಶಿಬಿರ, ಕೌನ್ಸಿಲಿಂಗ್ ಕೂಡ ಅಗತ್ಯವಿದೆ ಎಂದರು.

ದೇಶದ ಯಾವುದೇ ಮೂಲೆಯಲ್ಲಿ ಹೆಣ್ಮಕ್ಕಳ ಮೇಲೆ ದೌರ್ಜನ್ಯ ನಡೆದರೂ ಕೂಡ ಆಯೋಗ ಅದನ್ನು ಪಕ್ಷಾತೀತವಾಗಿ ಕಾಣುತ್ತದೆ. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ಎಲ್ಲಾ ರೀತಿಯ ಸಹಾಯ, ಸಹಕಾರ ನೀಡುತ್ತದೆ. ಯಾವ ಕಾರಣಕ್ಕೂ ಅಪರಾಧಿಗಳ ಪರ ನಿಲ್ಲುವುದಿಲ್ಲ ಎಂದು ಶ್ಯಾಮಲಾ ಕುಂದರ್, ಕಾನೂನು ದುರ್ಬಳಕೆ ಮಾಡುವುದರ ವಿರುದ್ಧವೂ ಎಚ್ಚರಿಕೆ ವಹಿಸಲಿದೆ ಎಂದರು.

ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬಿ

ವಿವಿಧ ದೂರುಗಳನ್ನು ಹೊತ್ತು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ಬರುವ ಮಹಿಳೆಯರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವುದರೊಂದಿಗೆ ಅವರಿಗೆ ನೈತಿಕ ಬಲ ತುಂಬುವ ಕೆಲಸವನ್ನು ಪೊಲೀಸರು ಮಾಡಬೇಕು. ನೊಂದ ಮಹಿಳೆಯರಿಗೆ ಸರಿಯಾದ ನ್ಯಾಯ ದೊರೆಯಬೇಕು. ಯಾವುದೇ ಕಾರಣಕ್ಕೂ ಅವರು ನ್ಯಾಯವಂಚಿತರಾಗಬಾರದು ಎಂದು ಶ್ಯಾಮಲಾ ಕುಂದರ್ ಹೇಳಿದರು.

ಮಂಗಳೂರು ವಿವಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ಪ್ರಕರಣವೊಂದು ಇನ್ನೂ ಇತ್ಯರ್ಥವಾಗಿಲ್ಲ. ತಪ್ಪಿತಸ್ಥರಿಗೆ ಇದುವರೆಗೂ ನೊಟೀಸ್ ನೀಡಿಲ್ಲ. ಗುರುವಾರ ಕುಲಪತಿಯನ್ನು ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ಶೋಕಾಸ್ ನೋಟಿಸ್ ನೀಡಿ ವಾರದೊಳಗೆ ಉತ್ತರ ಪಡೆಯುವಂತೆ ಸೂಚಿಸಿದ್ದೇನೆ. ಅಲ್ಲದೆ ಪ್ರತಿ ಕಾಲೇಜುಗಳಲ್ಲಿ ಕಡ್ಡಾಯವಾಗಿ ಇಂಟರ್‌ನಲ್ ಕಂಪ್ಲೆಂಟ್ ಕಮಿಟಿ(ಐಸಿಸಿ) ರಚಿಸುವಂತೆ ಸೂಚನೆ ನೀಡಿದ್ದೇನೆ ಎಂದು ಶ್ಯಾಮಲಾ ಕುಂದರ್ ತಿಳಿಸಿದರು.

ಸಖಿ ಒನ್ ಸ್ಟಾಪ್ ಸೆಂಟರ್

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕಾರ್ಯಾರಂಭಿಸುತ್ತಿದ್ದು, ಮಹಿಳೆಯರು ತಮ್ಮ ದೂರುಗಳನ್ನು ಈ ಕೇಂದ್ರಗಳಲ್ಲಿ ದಾಖಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಪ್ರಸ್ತುತ ಉಡುಪಿ ಸಹಿತ 4 ಜಿಲ್ಲೆಗಳಲ್ಲಿ ಈ ಕೇಂದ್ರಗಳು ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಕೇಂದ್ರದಲ್ಲಿ ನೊಂದ ಮಹಿಳೆಯರಿಗೆ ವೈದ್ಯಕೀಯ ನೆರವು ಹಾಗೂ ಸಮಾಲೋಚನೆ, ಪೊಲೀಸ್ ನೆರವು, ಆಪ್ತ ಸಮಾಲೋಚನೆ, ಕಾನೂನು ಸಲಹೆ, ತಾತ್ಕಾಲಿಕ ವಸತಿ ಇತ್ಯಾದಿ ಸೇವೆಗಳು ದೊರೆಯಲಿವೆ ಎಂದು ಶ್ಯಾಮಲಾ ಕುಂದರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News