ಜೈಲಿನಲ್ಲಿ ನನ್ನನ್ನು ಏಕಾಂಗಿಯಾಗಿಸಲಾಗಿದೆ: ನ್ಯಾಯಾಲಯದ ಮುಂದೆ ದೂರಿದ ಉಮರ್ ಖಾಲಿದ್

Update: 2020-10-22 13:33 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಉಮರ್ ಖಾಲಿದ್ ಅವರನ್ನು ತಿಹಾರ್ ಜೈಲಿನ ಅಧಿಕಾರಿಗಳು ಇಡೀ ದಿನ ಅವರಿರುವ ಸೆಲ್‍ನಿಂದ ಹೊರಕ್ಕೆ ಬರಲು ಬಿಡುತ್ತಿಲ್ಲ ಎಂದು ದಿಲ್ಲಿ ಹೈಕೋರ್ಟ್‍ಗೆ  ದೂರಲಾಗಿದೆ.

ಖಾಲಿದ್ ಅವರ ನ್ಯಾಯಾಂಗ ಬಂಧನ ಅವಧಿ ಇಂದು ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಕರ್ಕಡೂಮ ಹೆಚ್ಚುವರಿ ಸೆಶನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಅವರ ಮುಂದೆ  ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರು ಪಡಿಸಿದ ಸಂದರ್ಭ ಮೇಲಿನ ಆರೋಪ ಮಾಡಲಾಗಿದೆ.  ತಿಹಾರ್ ಜೈಲಿನಲ್ಲಿ ತಮ್ಮನ್ನು ಸಂಪೂರ್ಣವಾಗಿ ಒಂಟಿಯಾಗಿ ಇರಿಸಲಾಗಿದೆ ಹಾಗೂ ಇದು ಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಖಾಲಿದ್ ಹೇಳಿದ್ದಾರೆ.

''ಯಾವುದೇ ತಾರತಮ್ಯವಿಲ್ಲದೆ ಜೈಲಿನಲ್ಲಿ ಇರಿಸುವಂತೆ ನ್ಯಾಯಾಲಯ ಹೇಳಿದೆ. ಆದರೆ ನನ್ನನ್ನು ಸೆಲ್‍ನಿಂದ ಹೊರಕ್ಕೆ ಬರಲು ಬಿಡುತ್ತಿಲ್ಲ. ಯಾರಿಗೂ ನನ್ನ ಜತೆ ಮಾತನಾಡಲು ಬಿಡುತ್ತಿಲ್ಲ, ಜೈಲ್ ಸುಪರಿಂಟೆಂಡೆಂಟ್ ಬಳಿ ದೂರಿದಾಗ ಹತ್ತು ನಿಮಿಷ ಸೆಲ್‍ನಿಂದ ಹೊರಕ್ಕೆ ಬಿಟ್ಟರೂ ಅವರು ಮರಳುತ್ತಿದ್ದಂತೆಯೇ ಮತ್ತೆ ಸೆಲ್‍ನೊಳಕ್ಕೆ ಹಾಕಿದ್ದಾರೆ,'' ಎಂದು ಖಾಲಿದ್ ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ರಾವತ್ ನಾಳಿನ ವಿಚಾರಣೆ ವೇಳೆ ಜೈಲ್ ಸುಪರಿಂಟೆಂಡೆಂಟ್ ಅವರಿಗೆ ಹಾಜರಿರುವಂತೆ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News