ಉಡುಪಿ ಜಿಲ್ಲೆಯ ನೆರೆ ಸಂತ್ರಸ್ಥರಿಗೆ ನೀಡಲು 17.93 ಕೋಟಿ ರೂ. ಬಿಡುಗಡೆ

Update: 2020-10-22 14:06 GMT

ಉಡುಪಿ, ಅ. 22: ಈ ವರ್ಷದ ಮಳೆಗಾಲದಲ್ಲಿ ಸೆ.29ರವರೆಗೆ ಸುರಿದ ಭಾರಿ ಮಳೆಯಿಂದ ಆದ ಅಪಾರ ಹಾನಿಗಳಿಗೆ ಹಾಗೂ ನೆರೆ ಸಂತ್ರಸ್ಥರ ನಷ್ಟಗಳಿಗೆ ತುರ್ತು ಪರಿಹಾರ ನೀಡಲು ರಾಜ್ಯ ಸರಕಾರ ಒಟ್ಟು 17.93 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಈ ಬಗ್ಗೆ ರಾಜ್ಯ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ನಾಗರಾಜು ಎಸ್. ಅವರು ಅ.20ರಂದು ಆದೇಶವನ್ನು ಹೊರಡಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ 2020ನೇ ಸಾಲಿನಲ್ಲಿ ಜೂ.1ರಿಂದ ಸೆ.29ರವರೆಗೆ ಒಟ್ಟು 4485ಮಿ.ಮೀ. ಮಳೆಯಾಗಿದ್ದು, ಇದು ಜಿಲ್ಲೆಯ ವಾಡಿಕೆ ಮಳೆ ಗಿಂತ ಶೇ.14ರಷ್ಟು ಅಧಿಕ ಮಳೆಯಾಗಿದೆ. ಇದರಿಂದ ಉಡುಪಿ ಜಿಲ್ಲೆಯ ಉಡುಪಿ, ಕಾಪು, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕುಗಳಲ್ಲಿ ಸುಮಾರು 77 ಗ್ರಾಮಗಳು ಜಲಾವೃತಗೊಂಡಿದ್ದು, ನೆರೆ ನೀರು ನುಗ್ಗಿ 3694 ಮನೆಗಳಿಗೆ ಹಾನಿ ಯಾಗಿದೆಯಲ್ಲದೇ ಮನೆಯಲ್ಲಿದ್ದ ಗೃಹೋಪ ಯೋಗಿ ವಸ್ತುಗಳು ಸಂಪೂರ್ಣ ವಾಗಿ ನಷ್ಟವಾಗಿದೆ.

ಇದರೊಂದಿಗೆ ಅಪಾರ ಪ್ರಮಾಣದಲ್ಲಿ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೂ ಹಾನಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯ ಅನೇಕ ಕಡೆಗಳಲ್ಲಿ ರಸ್ತೆ, ಸೇತುವೆಗಳಿಗೆ, ಆಸ್ತಿಪಾಸ್ತಿಗಳಿಗೆ ಹಾನಿಗಿವೆ. ಈ ಎಲ್ಲಾ ಹಾನಿಗಳಿಗೆ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ತುರ್ತು ಪರಿಹಾರ ಪಾವತಿಸಲು 40 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಕೋರಿಕೆ ಸಲ್ಲಿಸಿದ್ದಾರೆ.

ಜಿಲ್ಲಾಧಿಕಾರಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರಕಾರ, ಸೆಫ್ಟೆಂಬರ್ ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸುರಿದ ಮಳೆಯು ಕಳೆದ 40 ವರ್ಷಗಳಲ್ಲೇ ದಾಖಲೆ ಪ್ರಮಾಣದ್ದಾಗಿದ್ದು, ಇದರಿಂದ ಜಿಲ್ಲೆಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಹಾನಿಯ ತುರ್ತು ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ 1793.46 ಲಕ್ಷ ರೂ.ಗಳ ಅನುದಾನವನ್ನು ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ.

ಬಿಡುಗಡೆಯಾದ ಅನುದಾನವನ್ನು ಅತಿವೃಷ್ಟಿ, ಪ್ರವಾಹದಿಂದ ಉಂಟಾದ ಹಾನಿಯ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಮಾತ್ರ ಉಪ ಯೋಗಿಸಿಕೊ ಳ್ಳಬೇಕು. ಜಲಾವೃತಗೊಂಡ ಮನೆಗಳ ಗೃಹೋಪಯೋಗಿ ವಸ್ತುಗಳಿಗೆ ಹಾಗೂ ಮನೆ ಹಾನಿ ಪರಿಹಾರವನ್ನು ಪರಿಷ್ಕೃತ ದರದಲ್ಲಿ ನೆರೆ ಸಂತ್ರಸ್ಥರಿಗೆ ಪಾವತಿಸಬೇಕು. ಈ ಅನುದಾನವನ್ನು ಮೂಲಭೂತ ಸೌಕರ್ಯಗಳ ತುರ್ತು ದುರಸ್ಥಿಗೆ ಭರಿಸಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ಷರತ್ತುಗಳನ್ನು ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News