ಉಡುಪಿ: ಕಾಸ್ಮಿಟಾಲಜಿ ಹಾಗೂ ಬ್ಯೂಟಿಯನ್ ಕಾರ್ಯಗಾರ

Update: 2020-10-22 14:13 GMT

ಉಡುಪಿ, ಅ.22: ಸ್ವದೇಶಿ ಸಂಪನ್ಮೂಲಗಳಿಂದ ಶ್ರೇಷ್ಠ ಉತ್ಪನ್ನಗಳನ್ನು ಬಳಸಿ. ವಿದೇಶಿ ಹಾಗೂ ರಾಸಾಯನಿಕ ಸೌಂದರ್ಯವರ್ಧಕಗಳಿಗೆ ಮಾರು ಹೋಗದೆ ಗುಣಮಟ್ಟದ ಸೌಂದರ್ಯ ಬೆಳೆಸುವ ಕೌಶಲ್ಯವನ್ನು ಮೈಗೂಡಿಸಿ ಉನ್ನತ ಮಟ್ಟದ ವೃತ್ತಿಪರರಾಗಿ ಮೂಡಿ ಬರುವಂತೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.

ಕೌಶಲ್ಯಾಭಿವೃದ್ಧಿ,ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಬೆಂಗಳೂರು, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಗಳೂರು ಹಾಗೂ ಉಡುಪಿಯ ಡಿ ಕ್ಯಾಬೆಲ್ಲೋ ಬ್ಯೂಟಿಪಾರ್ಲರ್ ಇವರ ಸಂಯುಕ್ತ ಆಶ್ರಯ ದಲ್ಲಿ ಜರಗಿದ 30 ದಿನಗಳ ಉಚಿತ ಕಾಸ್ಮಿಟಾಲಜಿ ಹಾಗೂ ಬ್ಯೂಟಿಯನ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಲಾಖೆಯ ಜಂಟಿ ನಿರ್ದೇಶಕ ಅರವಿಂದ ಡಿ ಬಾಳೇರಿ ಮಾತನಾಡಿ, ಸರಕಾರದ ವತಿಯಿಂದ ಕೊಡಮಾಡುವ ಉಚಿತ ತರಬೇತಿ ಹಾಗೂ ವಿವಿಧ ಸ್ವಉದ್ಯೋಗ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಜಿಲ್ಲಾ ಕೌಶಲ್ಯಾಧಿಕಾರಿ ಭಾಸ್ಕರ್ ಅಮೀನ್, ಜಿಲ್ಲೆಯ ನಿರುದ್ಯೋಗ ಯುವಕ ಯುವತಿಯರಿಗೆ ಅವರವರ ಆಸಕ್ತಿಗಳಿಗುಣವಾಗಿ ವಿವಿಧ ಕೌಶಲ್ಯ ತರಬೇತಿ ಗಳನ್ನು ನೀಡುವ ಕುರಿತು ತಿಳಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮೇಲ್ವಿಚಾರಕಿ ಚಂದ್ರಿಕಾ ನಾಯಕ್ ಉದ್ಯೋಗಿನಿ ಯೋಜನೆಯ ಕುರಿತು ವಿವರಿಸಿದರು.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಲಹೆಗಾರ ಜಗನ್ ಡಿ ಕ್ಯಾಬೆಲ್ಲೋ, ರಘು, ಸಿಡಾಕ್ ಉಡುಪಿ ಜಿಲ್ಲಾಕೇಂದ್ರದ ವ್ಯವಸ್ಥಾಪಕ ಪೃಥ್ವಿರಾಜ್ ನಾಯಕ್, ಅಭಿಲಾಷ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

ಸಿಡಾಕ್‌ನ ಸತೀಶ್ ಮಾಬೆನ್ ಸ್ವಾಗತಿಸಿ, ಮಹಿಳಾ ಸಲಹೆಗಾರ್ತಿ ಪ್ರವಿಷ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News