ನಿರ್ಲಕ್ಷ್ಯದ ವಾಹನ ಚಾಲನೆಗೆ ಯುವತಿ ಸಾವು ಪ್ರಕರಣ: ಹುಬ್ಬಳ್ಳಿ ಮೂಲದ ಯುವಕನಿಗೆ ಜೈಲುಶಿಕ್ಷೆ

Update: 2020-10-22 14:17 GMT

ಮಂಗಳೂರು, ಅ. 22: ಪಾನಮತ್ತನಾಗಿ ನಿರ್ಲಕ್ಷ್ಯದ ಚಾಲನೆ ನಡೆಸಿ, ಯುವತಿಯೊಬ್ಬಳ ಸಾವಿಗೆ ಕಾರಣವಾದ ಆರೋಪ ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಯದಲ್ಲಿ ಸಾಬೀತಾಗಿದ್ದು, ಅಪರಾಧಿಗೆ ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಹಳೇ ಹುಬ್ಬಳ್ಳಿ ಜಂಗಲೀಪೇಟೆ ನಿವಾಸಿ ಸುಮಿಯ್ ಮೊರಾಬ್(28) ಶಿಕ್ಷೆಗೊಳಗಾದ ಅಪರಾಧಿ. ಅಪಘಾತದಲ್ಲಿ ಬೆಳ್ತಂಗಡಿ ನಿವಾಸಿ ಅಶ್ವಿನಿ (23) ಎಂಬವರು ಮೃತಪಟ್ಟಿದ್ದರು.

ಪ್ರಕರಣ ವಿವರ: 2017ರ ಫೆಬ್ರವರಿ 28ರಂದು ಸಂಜೆ 4:15ರ ವೇಳೆಗೆ ಅಬೂಬಕರ್ ಅವರು ತನ್ನ ಆಟೋರಿಕ್ಷಾದಲ್ಲಿ ತನ್ನ ಪುತ್ರಿ ಸುಮಯ, ಪುತ್ರ ಮುಹಮ್ಮದ್ ಶಾನ್ ಮತ್ತು ಪ್ರಯಾಣಿಕರಾದ ಅಶ್ವಿನಿ (23) ಜತೆ ಬೆಳ್ತಂಗಡಿಯಿಂದ ಉಜಿರೆಗೆ ತೆರಳುತ್ತಿದ್ದರು. ಈ ಸಂದರ್ಭ ಕಡೂರು-ಬಂಟ್ವಾಳ ಹೆದ್ದಾರಿಯ ಬೆಳ್ತಂಗಡಿ ಎಚ್.ಬಿ. ಪೆಟ್ರೋಲ್ ಬಂಕ್ ಬಳಿ ಟೆಂಪೋವೊಂದು ಅಬೂಬಕರ್ ಚಲಾಯಿಸುತ್ತಿದ್ದ ರಿಕ್ಷಾಕ್ಕೆ ಢಿಕ್ಕಿಯಾಗಿದೆ. ಇದರಿಂದ ರಿಕ್ಷಾ ಪಲ್ಟಿಯಾಗಿ ಬಿದ್ದಿದ್ದು, ಟೆಂಪೋ ಚಾಲಕ ಮೊರಾಬ್ ವಾಹನ ಸಹಿತ ಸ್ಥಳದಿಂದ ಪರಾರಿಯಾಗಿದ್ದ. ಅಪಘಾತದಿಂದ ಅಶ್ವಿನಿ ಅವರು ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಉಳಿದಂತೆ ಅಬೂಬಕರ್ ಮತ್ತು ಇಬ್ಬರು ಮಕ್ಕಳಿಗೆ  ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಕೆಲವು ಗಂಟೆಯ ಬಳಿಕ ಆರೋಪಿ ಸುಮಿಯ್‌ನನ್ನು ಪೊಲೀಸರು ಬಂಧಿಸಿದ್ದರು. ಬೆಳ್ತಂಗಡಿ ವೃತ್ತ ನಿರೀಕ್ಷಕರು ಪ್ರಕರಣದಲ್ಲಿ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣವನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಯದ ನ್ಯಾಯಾಧೀಶ ಟಿ.ಪಿ. ರಾಮಲಿಂಗೇಗೌಡ ಸಮಗ್ರ ವಿಚಾರಣೆ ನಡೆಸಿ ಅಪರಾಧ ವನ್ನು ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ.

ಶಿಕ್ಷೆ ಪ್ರಮಾಣ: ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 304ಎ (ನಿರ್ಲಕ್ಷದ ಚಾಲನೆ) ಒಂದು ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5ಸಾವಿರ ರೂ. ದಂಡ, ದಂಡ ಕಟ್ಟಲು ವಿಲವಾದಲ್ಲಿ 1ತಿಂಗಳ ಸಜೆ, ಐಪಿಸಿ 279ರಡಿ (ಸಾರ್ವಜನಿಕ ಸ್ಥಳದಲ್ಲಿ ಮಾನವ ಜೀವಕ್ಕೆ ಅಪಾಯ ರೀತಿ ಚಾಲನೆ) 3 ತಿಂಗಳು ಸಾದಾ ಸಜೆ, 1ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನ ಕಾರಾಗೃಹ ಶಿಕ್ಷೆ, ಐಪಿಸಿ 337 (ಸಾದಾ ಗಾಯ)ರಡಿ 3 ತಿಂಗಳು ಸಜೆ, 500 ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಸಂತ್ರಸ್ತರ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News